ಸಹಕಾರ ಕ್ಷೇತ್ರದಲ್ಲಿ ಸಾಧನೆಗೆ ಹೆಸರಾಗಿ, ಸತತ ಸಾಧನೆಯನ್ನು ಮಾಡುತ್ತಲೇ ಸಮಾಜದ ಎಲ್ಲಾ ವರ್ಗಗಳ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ವಿವಿಧ ಸಾಮಾಜಿಕ, ಆರ್ಥಿಕ ಸೇವೆಗಳನ್ನು ನಿಸ್ವಾರ್ಥ ಮನೋಭಾವನೆಯೊಂದಿಗೆ, ಜವಾಬ್ದಾರಿಯುತ ಕಾರ್ಯವೈಖರಿಯೊಂದಿಗೆ ನಿರ್ವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿರುವ ಉಡುಪಿಯ ಪ್ರತಿಷ್ಠಿತ ಸಹಕಾರ ಸಂಘ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾÊಟಿ ಲಿಮಿಟೆಡ್.
ಪುಸ್ತಕದಲ್ಲಿರುವ ಪಠ್ಯವನ್ನು ಓದಿ ಅಂಕ ಗಳಿಸುವುದು ಅನಿವಾರ್ಯವಾದರೂ ಅದರೊಂದಿಗೆ ಜೀವನದಲ್ಲಿ ಉನ್ನತ ಸ್ಥಾನಮಾನ ಗಿಟ್ಟಿಸಿಕೊಳ್ಳಲು ನಿರಂತರ ಕಲಿಕೆ ಅತ್ಯಗತ್ಯ. ಆಧುನಿಕ ಯುಗದಲ್ಲಿ ವಿದ್ಯಾಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಂಡು ಸುದ್ದಿ ಪತ್ರಿಕೆ, ಸಾಹಿತ್ಯಾದಿ ಪುಸ್ತಕಗಳನ್ನು ಓದಿದಾಗ ಜೀವನಕ್ಕೆ ಬೇಕಾದ ಮೌಲ್ಯ, ಸಾಮರ್ಥ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಉಡುಪಿ ಎಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು. ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಉಡುಪಿ ಅಜ್ಜರಕಾಡು ಟೌನ್ ಹಾಲ್ನಲ್ಲಿ ದಿನಾಂಕ 22-06-2024 ಶನಿವಾರ ನಡೆದ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ 12 ಲ.ರೂ. ಮೌಲ್ಯಕ್ಕೂ ಮಿಕ್ಕಿದ ನೋಟ್ ಪುಸ್ತ, ಶೈಕ್ಷಣಿಕ ಪರಿಕರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇರಿಸಿಕೊಂಡು ಆ ನಿಟ್ಟಿನಲ್ಲಿ ಶ್ರಮಿಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಕೆ. ಗಣಪತಿಯವರು ಹೇಳಿದರು.










