



ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರ, ಪ್ರತಿಭಾ ಪುರಸ್ಕಾರ, ಸಸಿ ವಿತರಣಾ ಸಮಾರಂಭ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಜರಗಿತು.
ಉಡುಪಿ ತಹಸೀಲ್ದಾರ್ ಪಿ. ಗುರುರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಕೆ.ಆರ್ ಮಾತನಾಡಿದರು.
ಉಡುಪಿ ನಗರ ಸಭೆ ಪರಿಸರ ಅಭಿಯಂತರ ರವಿಪ್ರಕಾಶ್, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್, ಸೊಸೈಟಿಯ ಉಪಾಧ್ಯಕ್ಷರಾದ ಜಾರ್ಜ್ ಸ್ಯಾಮ್ಯುಯೆಲ್, ನಿರ್ದೇಶಕರಾದ ಪುರುಷೋತ್ತಮ ಪಿ. ಶೆಟ್ಟಿ, ಜಯಾ ಶೆಟ್ಟಿ, ಸದಾಶಿವ ನಾಯ್ಕ್, ಎಲ್. ಉಮಾನಾಥ, ವಿನಯ ಕುಮಾರ್ ಟಿ ಎ, ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಸಹಕಾರ ವರ್ಷ-2025 ಅಂಗವಾಗಿ “ಏಕ್ ಪೇಡ್ ಮಾ ಕೆ ನಾಮ್” ಧ್ಯೇಯ ವಾಕ್ಯದಡಿ ಗಿಡ ನೆಡುವ ಸಂಕಲ್ಪ, ಹಸಿರು ಪರಿಸರ ನಿರ್ಮಾಣದ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸಹಕಾರ ಇಲಾಖೆ ವತಿಯಿಂದ ವಿದ್ಯಾರ್ಥಿ, ಸಂಘ ಸಂಸ್ಥೆಗಳ ಮೂಲಕ ತಾಯಿ ಹೆಸರಲ್ಲಿ ಮನೆಗೊಂದು ಗಿಡ ನೆಡಲು ಅಂದು ಲಕ್ಷ ಗಿಡ ವಿತರಿಸುತ್ತಿದ್ದು, ಗಿಡವನ್ನು ಉತ್ತಮವಾಗಿ ಪೋಷಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಘೋಷಿಸಲಾಯಿತು.
- ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
- ಹಸಿರು ಜಾಗೃತಿ ಅಂಗವಾಗಿ ಭಿತ್ತಿಪತ್ರ ಅನಾವರಣ, ಶಾಲಾ ಮಕ್ಕಳಿಗೆ ಗಿಡ ವಿತರಣೆ
- ಕನ್ನಡ ಮಾಧ್ಯಮದ 35 ಶಾಲಾ ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶಿಕ್ಷಣ ಪರಿಕರ, ಸಮವಸ್ತ್ರ ವಿತರಣೆ
ಕೆರೆಯ ನೀರನು ಕೆರೆಗೆ ಚೆಲ್ಲಿ ಧ್ಯೇಯದಡಿ ಗಳಿಸಿದ ಲಾಭಾಂಶದಲ್ಲಿ ಸಮಾಜಮುಖಿ ಯೋಜನೆಗಳಿಗೆ ಪ್ರತಿವರ್ಷ 25 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ.
– ಬಿ. ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ
ಪ್ರತಿಭೆ ಬಂಡವಾಳ, ಆತ್ಮವಿಶ್ವಾಸ ಹೆಚ್ಚಳ
ಮಕ್ಕಳೇ… ನಿಮ್ಮ ಪ್ರತಿಭೆಯೇ ಬಂಡವಾಳವಾಗಲಿ, ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಿ, ಸಣ್ಣದಲ್ಲ ದೊಡ್ಡ ಕನಸನ್ನೇ ಕಾಣಿ ಎಂದು ತರಬೇತುದಾರರಾದ ರಾಜೇಂದ್ರ ಭಟ್ ಕೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಶೇಷ ಉಪನ್ಯಾಸ ನೀಡಿ 1,300 ಗಿಡ ನೆಟ್ಟು ಬೆಳೆಸಿದ ಸಾಲು ಮರದ ತಿಮ್ಮಕ್ಕ, ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ, ಶಾಸ್ತ್ರೀಯ ಸಂಗೀತದ ಮೂಲಕ 1,300 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾದ ಮಧ್ಯಪ್ರದೇಶದ ಫಾಲಕ್ ಮುಚ್ಚಲ್ ಸಾಧನೆಯನ್ನು ವಿದ್ಯಾರ್ಥಿಗಳ ಮುಂದೆ ಪರಿಣಾಮಕಾರಿಯಾಗಿ ಪ್ರೇರೇಪಿಸುವಂತೆ ಪ್ರಸ್ತುತಪಡಿಸಿದರು.
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಮಲ್ಪೆ ಶಾಖಾ ವ್ಯವಸ್ಥಾಪಕರಾದ ನವೀನ್ ಕೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ವಂದಿಸಿದರು.

