ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಮಾರ್ಪಳ್ಳಿ ಶಂಕರ್ ಶೇರಿಗಾರ್ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಆರಂಭದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಂಡ ಶಂಕರ ಶೇರಿಗಾರ್ ಕ್ರಮೇಣ ಕಿರಿಯ ಗುಮಾಸ್ತ, ಹಿರಿಯ ಗುಮಾಸ್ತ ಹುದ್ದೆಯನ್ನು ಅಲಂಕರಿಸಿದ್ದರು. ಬಳಿಕ ವಿವಿಧ ಶಾಖೆಗಳಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದ ಇವರು ಸಾಲ ವಸೂಲಾತಿ ವಿಭಾಗದಲ್ಲಿ ಹಾಗೂ ಮಾರಾಟಾಧಿಕಾರಿಯಾಗಿಯೂ ಬಹಳ ನಿಷ್ಠೆಯಿಂದ ದುಡಿದಿದ್ದಾರೆ. ಇದೀಗ ಶಾಖಾ ವ್ಯವಸ್ಥಾಪಕರಾಗಿ ವಯೋನಿವೃತ್ತಿ ಹೊಂದಿರುವ ಶಂಕರ ಶೇರಿಗಾರ್ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅವರ ಮುಂದಿನ ಜೀವನ ಶ್ರೇಯಸ್ಸಿನಿಂದ ತುಂಬಿರಲಿ ಎಂದು ಬಡಗಬೆಟ್ಟು ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುವೆಲ್, ಪ್ರಧಾನ ವ್ಯವಸ್ಥಾಪಕಾರದ ರಾಜೇಶ್ ವಿ. ಶೇರಿಗಾರ್, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.

