ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾದ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2024-25ನೇ ಸಾಲಿನಲ್ಲಿ ರೂ. 2,935 ಕೋಟಿ ವಾರ್ಷಿಕ ವಹಿವಾಟು ನಡೆಸಿ ರೂ. 19.37 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಹಕಾರ ಕ್ಷೇತ್ರದಲ್ಲಿ 107 ವರ್ಷಗಳಿಂದ ಸಾರ್ಥಕ ಸೇವೆಯನ್ನು ನೀಡುತ್ತಿರುವ ಸಂಘವು 2024-25 ಆರ್ಥಿಕ ವರ್ಷಾಂತ್ಯಕ್ಕೆ ಇದ್ದಂತೆ 21,519 ಸದಸ್ಯರಿಂದ 4.83 ಕೋ.ರೂ ಪಾಲು ಬಂಡವಾಳ ಹೊಂದಿರುತ್ತದೆ.
1,050 ಕೋಟಿ ರೂ. ಸಾರ್ವಕಾಲಿಕ ದಾಖಲೆಯ ವ್ಯವಹಾರ
ವರದಿ ವರ್ಷಾಂತ್ಯಕ್ಕೆ ಸಂಘವು ಒಟ್ಟು ರೂ.573 ಕೋಟಿ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ ಶೇ.12.45 ಏರಿಕೆ ಕಂಡಿದೆ. ಸದಸ್ಯರಿಗೆ ಗೃಹನಿರ್ಮಾಣ, ವಾಹನ ಖರೀದಿಯ ಬಗ್ಗೆ, ಜಮೀನು ಖರೀದಿ ಮತ್ತು ಅಭಿವೃದ್ಧಿಯ ಬಗ್ಗೆ, ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯ ನಿರ್ಮಾಣದ ಬಗ್ಗೆ, ಸ್ವಉದ್ಯೋಗಕ್ಕಾಗಿ, ವಿದ್ಯಾಭ್ಯಾಸ, ಮದುವೆ, ಚಿನ್ನಾಭರಣಗಳ ಈಡಿನ ಮೇಲೆ ಹಾಗೂ ಮನೆವಾರ್ತೆಗಳಿಗೆ ಸೂಕ್ತ ದಾಖಲೆಗಳನ್ನು ಪಡೆದುಕೊಂಡು ಸಾಲವನ್ನು ವಿತರಿಸುತ್ತಿದ್ದು ವರದಿ ವರ್ಷಾಂತ್ಯಕ್ಕೆ 477 ಕೋ.ರೂ ಸದಸ್ಯರ ಹೊರಬಾಕಿ ಸಾಲ ಇದ್ದು, ಕಳೆದ ಸಾಲಿಗಿಂತ ಶೇ.18.62 ಏರಿಕೆ ಕಂಡಿದೆ. 95.18 ಕೋ.ರೂ ನಿಧಿಗಳು, 229.73 ಕೋ.ರೂ ಹೂಡಿಕೆಗಳು ಇದ್ದು, ರೂ.673.20 ಕೋಟಿ ರೂ. ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ. ಸಂಘವು ತನ್ನ ಕಾರ್ಯಕ್ಷೇತ್ರದಲ್ಲಿ 11 ಶಾಖೆಗಳನ್ನು ಹೊಂದಿದ್ದು ಈ ಪೈಕಿ 8 ಶಾಖೆಗಳು ಸಂಘದ ಸ್ವಂತ ನಿವೇಶನದಲ್ಲಿರುತ್ತದೆ. 12ನೇ ಶಾಖೆಯಾಗಿ ಕುಂದಾಪುರದ ಹೃದಯಭಾಗದಲ್ಲಿ ಸ್ವಂತ ಕಛೇರಿಯನ್ನು ಈಗಾಗಲೇ ಖರೀದಿಸಲಾಗಿದ್ದು, ಸದ್ಯದಲ್ಲೇ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.
ಸತತವಾಗಿ 2 ಬಾರಿ ರಾಷ್ಟç ಪ್ರಶಸ್ತಿ, 9 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ, 18 ಬಾರಿ ಅವಿಭಜಿತ ದ.ಕ ಜಿಲ್ಲಾ ಪ್ರಶಸ್ತಿಗಳನ್ನು ಪಡೆದು ಯಶಸ್ವೀ ಕ್ರೆಡಿಟ್ ಸೊಸೈಟಿ ಯಾಗಿ ಸಂಘವು ಗುರುತಿಸಿಕೊಂಡಿದೆ. ಕೇವಲ ವ್ಯವಹಾರ ಮಾಡಿ ಲಾಭ ಗಳಿಸುವ ದೃಷ್ಟಿಯನ್ನು ಮಾತ್ರ ಇಟ್ಟುಕೊಳ್ಳದೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ವಾರ್ಷಿಕ ಸುಮಾರು ರೂ. 20 ಲಕ್ಷದಷ್ಟು ಶಿಕ್ಷಣದ ಬಗ್ಗೆ, ಆರೋಗ್ಯದ ಬಗ್ಗೆ, ಸಾಮಾಜಿಕ ಕಾರ್ಯಕ್ರಮಗಳಿಗೆ ತೊಡಗಿಸುತ್ತಾ ಬಂದಿರುತ್ತದೆ.
ಚೇತನಾ ಮೊಬೈಲ್ ಆ್ಯಪ್
ಡಿಜಿಟಲೀಕರಣದ ಹೆಜ್ಜೆಯಾಗಿ ಅಭಿವೃದ್ಧಿಪಡಿಸಿದ “ಚೇತನಾ ಮೊಬೈಲ್ ಆ್ಯಪ್” ಮೂಲಕ ಗ್ರಾಹಕರು ತಾವಿರುವಲ್ಲಿಯೇ ತಮ್ಮ ಖಾತೆಯಿಂದ IMPS/NEFT/RTGS ಮೂಲಕ ಮೊಬಲಗು ವರ್ಗಾವಣೆ, RD ಹಾಗೂ ಸಾಲ ಖಾತೆಗಳಿಗೆ ಮೊಬಲಗು ವರ್ಗಾಯಿಸುವುದು, ಸಂಘದ ನೂತನ ಯೋಜನೆಯ ಕುರಿತಾದ ಮಾಹಿತಿಗಳನ್ನೂ ಪಡೆಯಬಹುದಾಗಿದ್ದು, ಸದ್ರಿ ಆ್ಯಪ್ ಬಗ್ಗೆ ಬಳಕೆದಾರರಿಂದ ಉತ್ತಮ ಸ್ಪಂದನೆ ದೊರೆತಿರುತ್ತದೆ. ಗೂಗಲ್ ಪ್ಲೇ-ಸ್ಟೋರ್, ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ ಲಭ್ಯವಿರುವ ಈ ಆ್ಯಪ್ನ ಪ್ರಯೋಜನ ಪಡೆಯುವ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಶಾಖೆಗೆ ತೆರಳಿ ಮಾಹಿತಿ ಪಡೆಯುವಂತೆ ತಿಳಿಸಿದರು.
ಆಧುನಿಕತೆಗೆ ಸಾಕ್ಷಿಯಾಗಿ ದೈನಿಕ ಠೇವಣಿ ಸಂಗ್ರಹಣೆಯನ್ನು ಮೊಬೈಲ್ ಆ್ಯಪ್ (ಪಿಗ್ಮಿ ಮೊಬೈಲ್ ಆ್ಯಪ್) ಮೂಲಕ ನಡೆಸಲಾಗುತ್ತಿದೆ. ಸಂಘದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಸೇವೆ ನೀಡುವ ಸಲುವಾಗಿ ಈಗಾಗಲೇ ಸೇಫ್ ಲಾಕರ್ ಸೌಲಭ್ಯ, ಇ-ಸ್ಟಾಂಪಿAಗ್, ಪಾನ್ ಕಾರ್ಡ್, ಓಇಈಖಿ/ಖಖಿಉS ಸೇವಾ ಸೌಲಭ್ಯ, ಮನಿ ಟ್ರಾನ್ಸ್ಫರ್ ಸೌಲಭ್ಯ, ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್, ಆರೋಗ್ಯ ವಿಮೆ, ಸಾಮಾನ್ಯ ವಿಮೆ, “0” ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್ಡ್ಕಾಲ್ ಸರ್ವಿಸ್, ಉಚಿತ ಎಸ್.ಎಂ.ಎಸ್ ಸೌಲಭ್ಯ ನೀಡುತ್ತಿದ್ದು, ಸಂಘದ ಎಲ್ಲಾ ಮಾಹಿತಿ, ಅಪ್ಡೇಟ್ಸ್ಗಳಿಗೆ www.badagabettusociety.com/kannada ಜಾಲತಾಣ ಭೇಟಿ ನೀಡಬಹುದು ಎಂದು ತಿಳಿಸಿದರು.
ಮುಂದಿನ ಗುರಿ - 1,500 ಕೋಟಿ ರೂ.
ಮುಂದಿನ ವರದಿ ವರ್ಷದಲ್ಲಿ ರೂ. 800 ಕೋಟಿ ಠೇವಣಿ, ರೂ.700 ಕೋಟಿ ಹೊರಬಾಕಿ ಸಾಲ ಅಂದರೆ ಒಟ್ಟು 1,500 ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊಂದಿದ್ದು, ಉಡುಪಿಯ ಹೃದಯ ಭಾಗದಲ್ಲಿ ಈಗಾಗಲೇ ಖರೀದಿಸಿರುವ 1 ಎಕ್ರೆ ಆಸ್ತಿಯಲ್ಲಿ ಅಂದಾಜು ರೂ.10.00 ಕೋಟಿ ವೆಚ್ಚದಲ್ಲಿ “ಸಹಕಾರ ಸೌಧ” ನಿರ್ಮಾಣದ ಯೋಜನೆಯನ್ನು ಹಾಕಿಕೊಂಡಿದೆ.
ಪ್ರತಿಯೊಂದು ಶಾಖೆಗಳಲ್ಲಿ ಶಾಖಾ ಸಲಹಾ ಸಮಿತಿಗಳನ್ನು ರಚನೆ ಮಾಡಿದ್ದು, ಆಯಾ ಸಮಿತಿ ಸದಸ್ಯರ ಮೇಲ್ವಿಚಾರಣೆಯಲ್ಲಿ ಪ್ರತಿಯೊಂದು ಶಾಖೆಗಳಲ್ಲಿ ಹೊಸ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುವ ಚಿಂತನೆಯನ್ನು ಹಾಕಿಕೊಂಡಿರುತ್ತೇವೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುಯೆಲ್, ಆಡಳಿತ ಮಂಡಲಿಯ ಸದಸ್ಯರಾದ ಸಂಜೀವ ಕಾಂಚನ್, ಪುರುಷೋತ್ತಮ ಪಿ. ಶೆಟ್ಟಿ, ಉಮಾನಾಥ ಎಲ್, ವಿನಯ ಕುಮಾರ್ ಟಿ.ಎ, ಪದ್ಮನಾಭ ನಾಯಕ್, ಸೈಯದ್ ಅಬ್ದುಲ್ ರಜಾಕ್, ಸದಾಶಿವ ನಾಯ್ಕ್, ಮನೋಹರ ಎಸ್. ಶೆಟ್ಟಿ, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರಿ ಎಸ್. ಭಟ್, ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

