Badagabettu Society

ಉಚಿತ ಆರೋಗ್ಯ ತಪಾಸಣಾ ಶಿಬಿರ -2026

ಬ್ಯಾಂಕ್​, ಸಹಕಾರಿ ಸಂಘಗಳು ಕೇವಲ ಆರ್ಥಿಕ ವ್ಯವಹಾರಕ್ಕೆ ಮಾತ್ರ ಸೀಮಿತವಾಗಬಾರದು. ಸಾರ್ವಜನಿಕರೊಂದಿಗೆ ಬೆರೆಯುವ, ಜನರು ಸಂಕಷ್ಟದಲ್ಲಿದ್ದಾಗ ಸ್ಪಂದಿಸುವ ಕಾರ್ಯವೂ ಆಗಬೇಕು. ಪರಿಸರರಕ್ಷಣೆಯೊಂದಿಗೆ ಪ್ರಕೃತಿಗೆ ಕೊಡುಗೆ ನೀಡಬೇಕು, ಆರೋಗ್ಯ, ಶೈಕ್ಷಣಿಕ ಕ್ಷೇತ್ರದ ಅಬಿವೃದ್ಧಿಗೆ ಸಹಕಾರ ನೀಡಬೇಕು. ಆ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಬಡಗಬೆಟ್ಟು ಸೊಸೈಟಿಯ ಹಾಗೂ ಜಿಲ್ಲಾ ಸಹಕಾರ ಯೂನಿಯನ್​ನ ಅಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಉಡುಪಿ ನಗರದಲ್ಲಿರುವ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಮಿನಿ ಹಾಲ್​ನಲ್ಲಿ ಉಡುಪಿಯ ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಸಹಕಾರದಲ್ಲಿ ಭಾನುವಾರ (ಜು.5) ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಕೇಂದ್ರ ಸರಕಾರದ ಸಹಕಾರ ಸಚಿವಾಲಯ ಐದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ‘ಸಹಕಾರದಿಂದ ಸಮೃದ್ಧಿ’ ಧ್ಯೇಯದೊಂದಿಗೆ ಹಾಗೂ ಸಹಕಾರ ಸಪ್ತಾಹ ಆಚರಣೆ ನಿಮಿತ್ತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಡುಪಿ ಶ್ರೀಸಿದ್ಧಿ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ್​ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. 

ಹಿರಿಯ ವಕೀಲ ಶಾಂತಾರಾಮ್ ಶೆಟ್ಟಿ, ಗುರು ನಿತ್ಯಾನಂದ ಕೋ-ಆರಪೇಟಿವ್ ಸೊಸೈಟಿಯ ಅಧ್ಯಕ್ಷ ಸುರೇಶ್ ಶೆಟ್ಟಿ, ಜಿಲ್ಲಾ ಸಹಕಾರ ಯೂನಿಯನ್ನ ಸಿಇಒ ಅನೂಷಾ ಕೋಟ್ಯಾನ್ ಮಾತನಾಡಿದರು. 

ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಬಡಗಬೆಟ್ಟು ಸೊಸೈಟಿಯ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ನಿರ್ದೇಶಕರಾದ ಜಯಾ ಶೆಟ್ಟಿ, ಸದಾಶಿವ್ ನಾಯ್ಕ್, ವಿನಯ ಕುಮಾರ್, ಪದ್ಮನಾಭ ನಾಯಕ್, ಎಲ್.ಉಮಾನಾಥ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಇತರರು ಉಪಸ್ಥಿತರಿದ್ದರು.

ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಸ್ವಾಗತಿಸಿದರು. ಮಲ್ಪೆ ಶಾಖೆಯ ವ್ಯವಸ್ಥಾಪಕ ನವೀನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿ ಪ್ರಸಾದ್​ ನೇತ್ರಾಲಯ, ನೇತ್ರ ಜ್ಯೋತಿ ಚಾರಿಟೇಬಲ್​ ಟ್ರಸ್ಟ್​ ಹಾಗೂ ಮೆಡಿಕ್ವೆಸ್ಟ್​ ಹೆಲ್ತ್​ಕೇರ್​ ವತಿಯಿಂದ ಉಚಿತವಾಗಿ ನೇತ್ರ ತಪಾಸಣೆ, ಫಿಸಿಯೋಥೆರಪಿ, ಬ್ಲಡ್​ ಶುಗರ್​ ಟೆಸ್ಟ್​ ಮಾಡಲಾಯಿತು. ನೂರಾರು ಮಂದಿ ಪ್ರಯೋಜನ ಪಡೆದರು.

ದೇಹದಲ್ಲಿ ಕಣ್ಣು ಪ್ರಮುಖ ಅಂಗವಾಗಿದ್ದು, ಎಲ್ಲ ವಯೋಮಾನದವರೂ ಸಹ ವರ್ಷಕ್ಕೆ ಒಮ್ಮೆಯಾದರೂ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿನಲ್ಲಿ ಸಮಸ್ಯೆ ಇದ್ದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ. ನಿಟ್ಟಿನಲ್ಲಿ ಇಂತಹ ಶಿಬಿರಗಳು ತುಂಬ ಪ್ರಯೋಜನಕಾರಿ. ನೇತ್ರದಾನವೂ ಸಹ ಎಲ್ಲ ದಾನಗಳಂತೆ ಪ್ರಮುಖವಾದುದಾಗಿದ್ದು, ಮರಣದ ನಂತರ ತಮ್ಮ ಕಣ್ಣನ್ನು ಬೇರೆಯವರಿಗೆ ದಾನಮಾಡಿ ಅವರ ಬಾಳಿನಲ್ಲಿ ಬೆಳಕಾಗಬೇಕು.

ಡಾ.ಮೇಘನಾ. ಉಡುಪಿ ಪ್ರಸಾದ್ನೇತ್ರಾಲಯದ ನೇತ್ರತಜ್ಞೆ.