Badagabettu Society

ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಸಸಿ ವಿತರಣೆ ಕಾರ್ಯಕ್ರಮ -2026

ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಉಡುಪಿ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಸುಮಾರು ₹20 ಲಕ್ಷ ಮೌಲ್ಯದ ನೋಟ್‌ಪುಸ್ತಕಗಳು, ಶೈಕ್ಷಣಿಕ ಪರಿಕರಗಳು, ಪ್ರತಿಭಾ ಪುರಸ್ಕಾರಗಳು ಹಾಗೂ ಸಸಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತ ಸ್ಕೌಟ್ಸ್ ಆಂಡ್ ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರು, ಭಾರತದಲ್ಲಿ ಸಹಕಾರಿ ಕ್ಷೇತ್ರವು ವಾಣಿಜ್ಯ ಬ್ಯಾಂಕ್‌ಗಳಿಗೆ ಸಮಾನಾಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ಬಡಗಬೆಟ್ಟು ಸೊಸೈಟಿ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳ 24 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 5 ಲಕ್ಷ ರೂ.ಕ್ಕೂ ಅಧಿಕ ಸಹಾಯಧನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲೆಯ 45 ಕನ್ನಡ ಮಾಧ್ಯಮ ಶಾಲೆಗಳಿಗೆ ಉಚಿತ ನೋಟ್ ಪುಸ್ತಕಗಳು, 8 ಶಾಲೆಗಳಿಗೆ ಸಮವಸ್ತ್ರಗಳು, ಆರು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿಗೆ ಕಂಪ್ಯೂಟರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಯಿತು. ಶಾಲಾ ಶಿಕ್ಷಕರಿಗೆ ಕೊಡೆಗಳನ್ನೂ ವಿತರಿಸಲಾಯಿತು.

ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸೊಸೈಟಿಯ ನಿರ್ದೇಶಕರಾದ ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ, ಉಮಾನಾಥ್, ಜಯ ಶೆಟ್ಟಿ, ಗಾಯತ್ರಿ ಭಟ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಹಾಗೂ ಸಹಾಯಕ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ. ಮತ್ತು ಕುಂದಾಪುರ ಶಾಖಾ ವ್ಯವಸ್ಥಾಪಕ ಸಮರ್ಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ, ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕಾಮತ್ ಹಾಗೂ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಭಾಗವಹಿಸಿ ಮಾತನಾಡಿದರು. ವಿದ್ವಾನ್ ದಾಮೋದರ್ ಶರ್ಮ ಬಾರಕೂರು ವಿಶೇಷ ಉಪನ್ಯಾಸ ನೀಡಿದರು.