Badagabettu Society

ಲಯನ್ ಜಾರ್ಜ್ ಸ್ಯಾಮ್ಯುಯೆಲ್ ನಿಧನಕ್ಕೆ ಶ್ರದ್ಧಾಂಜಲಿ ಸಭೆ – ನುಡಿನಮನ

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಗತಿಯಲ್ಲಿ ಸದಾ ಮುಂಚೂಣಿಯಲ್ಲಿದ್ದು, ತಮ್ಮ ಅಪಾರ ಅನುಭವ, ಸರಳತೆ ಮತ್ತು ಸಮಾಜಮುಖಿ ಸೇವೆಯಿಂದ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿದ್ದ ಲಯನ್ ಜಾರ್ಜ್ ಸ್ಯಾಮ್ಯುಯೆಲ್ ಅವರ ನಿಧನವು ಸಹಕಾರ ಕ್ಷೇತ್ರ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಸಂಸ್ಥೆಯ ಉಪಾಧ್ಯಕ್ಷರೂ, ಹಿರಿಯ ಲಯನ್ಸ್ ಮುಖಂಡರೂ ಆಗಿದ್ದ ಲಯನ್ ಜಾರ್ಜ್ ಸ್ಯಾಮ್ಯುಯೆಲ್ ಅವರ ನಿಧನದ ಹಿನ್ನೆಲೆಯಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ ವತಿಯಿಂದ ಸಂಸ್ಥೆಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ನುಡಿನಮನ ಸಲ್ಲಿಸಿದರು.

ಅಂಚೆ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿದ್ದ ಲಯನ್ ಜಾರ್ಜ್ ಸ್ಯಾಮ್ಯುಯೆಲ್ ಅವರು, ನಿವೃತ್ತಿಯ ನಂತರವೂ ಲಯನ್ಸ್ ಸಂಸ್ಥೆ, ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಸಮುದಾಯ ಹಾಗೂ ಸೌಹಾರ್ದ ಸಮಿತಿಗಳ ಮೂಲಕ ಹಲವು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸೊಸೈಟಿಯ ನಿರ್ದೇಶಕರಾಗಿ ಹಾಗೂ ಉಪಾಧ್ಯಕ್ಷರಾಗಿ ಆಡಳಿತಾತ್ಮಕವಾಗಿ ಅವರು ನೀಡಿದ ಸಲಹೆ-ಮಾರ್ಗದರ್ಶನಗಳು ಎಂದೆಂದಿಗೂ ಸ್ಮರಣೀಯ ಎಂದು ಅಧ್ಯಕ್ಷರು ಸ್ಮರಿಸಿದರು.

ದಿವಂಗತರ ಸಹೋದ್ಯೋಗಿ ಮಿತ್ರರಾದ ಸೊಸೈಟಿಯ ನಿರ್ದೇಶಕ ಶ್ರೀ ಸದಾಶಿವ ನಾಯ್ಕ್ ಅವರು ನುಡಿನಮನ ಸಲ್ಲಿಸಿ, ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಜಾರ್ಜ್ ಸ್ಯಾಮ್ಯುಯೆಲ್ ಅವರು ತಮ್ಮ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ವ್ಯಕ್ತಿತ್ವದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು. ನಿವೃತ್ತಿಯ ನಂತರವೂ ಅಖಿಲ ಭಾರತ ಅಂಚೆ ಮತ್ತು ಆರ್‌ಎಂಎಸ್ ಪಿಂಚಣಿದಾರರ ಸಂಘದ ಮೂಲಕ ಪಿಂಚಣಿದಾರರ ಸಮಸ್ಯೆಗಳ ಪರಿಹಾರ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಸಕ್ರಿಯವಾಗಿ ಶ್ರಮಿಸಿ ಅನೇಕ ಜನರಿಗೆ ನೆರವಾಗಿದ್ದರು. ಅವರ ಸಮಾಜಮುಖಿ ಚಟುವಟಿಕೆಗಳು, ಮಾರ್ಗದರ್ಶನ ಮತ್ತು ಸೇವಾ ಮನೋಭಾವ ಎಲ್ಲರಿಗೂ ಆದರ್ಶವಾಗಿದ್ದು, ಅವರ ಅಗಲಿಕೆ ವೈಯಕ್ತಿಕವಾಗಿಯೂ ಹಾಗೂ ಸಮಾಜಕ್ಕೂ ಅಪಾರ ನಷ್ಟವಾಗಿದೆ ಎಂದು ನುಡಿದರು.
ಸಭೆಯಲ್ಲಿ ಸೊಸೈಟಿಯ ನಿರ್ದೇಶಕರುಗಳು, ದಿವಂಗತರ ಪುತ್ರ ಶ್ರೀ ರಂಜನ್ ಮನೋಹರ್, ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ವಿ ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್, ಲೆಕ್ಕಿಗರಾದ ಶ್ರೀ ಅಶ್ವಿನಿ ಕುಮಾರ್. ಎಮ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ದಿವಂಗತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡುವಂತೆ ಕೋರಿ ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.