ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕುಗಳು ವಿಲೀನಗೊಂಡು ಸ್ಥಳೀಯ ಬ್ಯಾಂಕ್‌ಗಳ ಅಸ್ತಿತ್ವ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಜನಸಾಮಾನ್ಯರಿಗೆ ಅಗತ್ಯವಾದ ಸೇವೆಗಳನ್ನು ನೀಡುವಲ್ಲಿ ಸಹಕಾರಿ ಸಂಸ್ಥೆಗಳು ದೇಶದಲ್ಲೇ ಅಗ್ರಗಣ್ಯ ಸ್ಥಾನ ಪಡೆದಿವೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಅವರು ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ ಇದರ ಸಂಪೂರ್ಣ ಹವಾನಿಯಂತ್ರಿತ 12ನೇ ಶಾಖೆಯನ್ನು ಕುಂದಾಪುರದ ಮುಖ್ಯರಸ್ತೆಯ ಪಾರಿಜಾತ ಹೋಟೆಲ್ ಸಮೀಪದ ಶ್ರೀ ನಂದಿಕೇಶ್ವರ ಟವರ್ಸ್ನಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ರಾಜ್ಯದಲ್ಲೇ ವಿಶಿಷ್ಟ ಸ್ಥಾನವಿದ್ದು, ಜನರ ಆರ್ಥಿಕ ಬೆಳವಣಿಗೆಯೊಂದಿಗೇ ಸಹಕಾರಿ ಕ್ಷೇತ್ರವೂ ಬೆಳೆಯುತ್ತಿದೆ ಎಂದರು.
ಜಯಕರ ಶೆಟ್ಟಿ ಹಾಗೂ ತಂಡದ ಪರಿಶ್ರಮ ಶ್ಲಾಘನೀಯ
ಸಂಸ್ಥೆ ಆರಂಭಿಸುವುದು ಸುಲಭವಾದರೂ ಅದನ್ನು ಲಾಭದಾಯಕವಾಗಿ ಮುನ್ನಡೆಸುವುದು ದೊಡ್ಡ ಸವಾಲು. ಸಹಕಾರಿ ಸಂಸ್ಥೆಗಳ ಬೆಳವಣಿಗೆಯಲ್ಲಿ ಸಿಬ್ಬಂದಿಗಳ ಜನಸ್ನೇಹಿ ಕಾರ್ಯವೈಖರಿ ಅತ್ಯಂತ ಮುಖ್ಯವಾಗಿದೆ. ಶತಮಾನಕ್ಕೂ ಅಧಿಕ ಇತಿಹಾಸವಿರುವ ಬಡಗಬೆಟ್ಟು ಸೊಸೈಟಿ ಕಳೆದ 35 ವರ್ಷಗಳಿಂದ ಜನರ ವಿಶ್ವಾಸ ಗಳಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದರ ಹಿಂದೆ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಅವರ ತಂಡದ ಪರಿಶ್ರಮ ಇದೆ ಎಂದು ಡಾ. ರಾಜೇಂದ್ರ ಕುಮಾರ್ ಶ್ಲಾಘಿಸಿದರು.
ಸಹಕಾರಿ ಸಂಘ ಬೆಳವಣಿಗೆಗೆ ಮಾದರಿ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶತಮಾನದ ಇತಿಹಾಸ ಹೊಂದಿರುವ ಈ ಸಹಕಾರಿ ಸಂಘವನ್ನು ಜಯಕರ ಶೆಟ್ಟಿಯವರು ಸಮರ್ಥವಾಗಿ ಕಟ್ಟಿಬಳೆಸಿದ್ದು, ಸಹಕಾರಿ ಸಂಸ್ಥೆಯನ್ನು ಯಾವ ರೀತಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಬಹುದು ಎಂಬುದಕ್ಕೆ ಇದು ಉತ್ತಮ ನಿದರ್ಶನವಾಗಿದೆ ಎಂದರು.
ಜನಪರ ಸೇವೆಗೆ ಒತ್ತು
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಹಕಾರಿ ಸಂಘಗಳು ಇಂದು ವಾಣಿಜ್ಯ ಬ್ಯಾಂಕುಗಳಿಗೆ ಸಮಾನಾಂತರವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚು ಸಮೀಪವಾಗಿವೆ ಎಂದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಹಿಂದೆ ಸಹಕಾರಿ ಕ್ಷೇತ್ರಕ್ಕೆ ವ್ಯಾಪ್ತಿಯ ಮಿತಿ ಇದ್ದರೂ ಈಗ ಅದು ಎಲ್ಲೆಡೆ ವಿಸ್ತರಿಸಿದೆ. ಜನರಿಗೆ ಇನ್ನಷ್ಟು ಆಕರ್ಷಕ ಸೇವೆ ಒದಗಿಸುವ ಅಗತ್ಯವಿದ್ದು, ಶಿಕ್ಷಣಕ್ಕಾಗಿ ಭದ್ರತೆ ರಹಿತ ಸಾಲ ಸೌಲಭ್ಯಗಳಂತಹ ಯೋಜನೆಗಳನ್ನು ಸಹಕಾರಿ ಸಂಘಗಳು ಆರಂಭಿಸಬೇಕು ಎಂದು ಸಲಹೆ ನೀಡಿದರು. ಸರ್ಕಾರದ ಮಟ್ಟದಲ್ಲಿ ಸಾಲದ ಬಡ್ಡಿದರ ಇಳಿಕೆಯ ಕುರಿತು ಚರ್ಚಿಸಿದರೆ ರೈತರು ಮತ್ತು ಯುವ ಸಮೂಹಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
18.13 ಕೋಟಿ ರೂ. ಲಾಭ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, 107 ವರ್ಷಗಳ ಇತಿಹಾಸವಿರುವ ಸಂಘವು ಹಲವು ಏಳು-ಬೀಳುಗಳನ್ನು ಎದುರಿಸಿದರೂ ಕಳೆದ ಮೂರು ದಶಕಗಳಿಂದ ಲಾಭದಾಯಕವಾಗಿ ಮುನ್ನಡೆಯುತ್ತಾ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ಪ್ರಸ್ತುತ ಸಂಘದಲ್ಲಿ 23 ಸಾವಿರ ಸದಸ್ಯರಿದ್ದು, 662 ಕೋಟಿ ರೂ. ಠೇವಣಿ, 528 ಕೋಟಿ ರೂ. ಹೊರಬಾಕಿ ಸಾಲ, 113.24 ಕೋಟಿ ರೂ. ನಿಧಿ, 284.07 ಕೋಟಿ ರೂ. ಹೂಡಿಕೆ ಹಾಗೂ 795 ಕೋಟಿ ರೂ. ದುಡಿಯುವ ಬಂಡವಾಳವಿದೆ. 2025-26ನೇ ಸಾಲಿನಲ್ಲಿ 4062.29 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ 18.13 ಕೋಟಿ ರೂ. ಲಾಭ ಗಳಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಸಹಕಾರವೇ ಕಾರಣ ಎಂದರು.
ಗೌರವ ಸನ್ಮಾನ
ಈ ಸಂದರ್ಭದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನೂತನ ಶಾಖೆಯ ಪ್ರಥಮ ಗ್ರಾಹಕರಿಗೆ ಖಾತೆ ಪಾಸ್‌ಬುಕ್ ಹಾಗೂ ಠೇವಣಿ ಪತ್ರ ವಿತರಿಸಲಾಯಿತು. ಇಂಜಿನಿಯರ್ ಮುರಳೀಧರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಟ್ಟಡದ ಮಾಲೀಕರಾದ ಜಿ. ಸುರೇಶ್ ಹಾಗೂ ಜಿ. ಉದಯ ಅವರನ್ನು ಗುರುತಿಸಲಾಯಿತು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ ಮೊಳಹಳ್ಳಿ, ಜಿಲ್ಲಾ ಸಹಕಾರಿ ಉಪನಿಬಂಧಕರಾದ ಲಾವಣ್ಯ ಕೆ.ಆರ್., ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ., ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಸಮರ್ಥ್ ಶೆಟ್ಟಿ ವಂದಿಸಿದರು.





