Badagabettu Society

ರಕ್ಷಾ ಬಂಧನ ಕಾರ್ಯಕ್ರಮ 28-08-2026

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ ಹಾಗೂ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಬ್ರಹ್ಮಗಿರಿ, ಉಡುಪಿ ಇವರ ಸಹಯೋಗದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಅವರು, “ರಕ್ಷಾ ಬಂಧನವು ಕೇವಲ ರಾಖಿ ಕಟ್ಟುವ ಹಬ್ಬವಲ್ಲ; ಇದು ಪ್ರೀತಿ, ವಿಶ್ವಾಸ, ಗೌರವ ಹಾಗೂ ಪರಸ್ಪರ ಕಾಳಜಿಯ ಪವಿತ್ರ ಬಾಂಧವ್ಯದ ಸಂಕೇತವಾಗಿದೆ. ರಾಖಿಯು ಕೇವಲ ಒಂದು ದಾರವಲ್ಲ, ಬದಲಾಗಿ ಸಂಬAಧಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಭಾವನಾತ್ಮಕ ಬಂಧವಾಗಿದ್ದು, ಪರಸ್ಪರ ಸಹಕಾರ, ಸುರಕ್ಷತೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರುತ್ತದೆ” ಎಂದು ಅಭಿಪ್ರಾಯಪಟ್ಟರು.

ಇಂದಿನ ವೇಗದ ಹಾಗೂ ಒತ್ತಡಭರಿತ ಜೀವನಶೈಲಿಯಲ್ಲಿ ಮನಸ್ಸಿನ ನೆಮ್ಮದಿ, ಆತ್ಮಸ್ಥೈರ್ಯ ಹಾಗೂ ಸಕಾರಾತ್ಮಕ ಚಿಂತನೆಗಾಗಿ ಆಧ್ಯಾತ್ಮಿಕ ಚಿಂತನೆ, ಭಗವಂತನ ಸ್ಮರಣೆ ಮತ್ತು ಧ್ಯಾನಕ್ಕೆ ಹೆಚ್ಚಿನ ಮಹತ್ವವಿದೆ. ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಮಾನವೀಯ ಮೌಲ್ಯಗಳು, ಆತ್ಮಜ್ಞಾನ ಹಾಗೂ ಧ್ಯಾನದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸದ್ಭಾವನೆಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆಯಾಗಿದೆ ಎಂದು ಪ್ರಜಾಪಿತಾ ಬ್ರಹ್ಮಕುಮಾರಿ ಸಂಸ್ಥೆಯ ಸಂಚಾಲಕರಾದ ಬಿ.ಕೆ. ಸುಮಕ್ಕ ಹೇಳಿದರು.
ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ಬಿ.ಕೆ. ಅಶ್ವಿನಿ, ಬಿ.ಕೆ. ಮೋಹನ್, ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಇದರ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ಹೆಗ್ಡೆ, ಸಂಘದ ಸ್ಥಿರಾಸ್ತಿ ಮೌಲ್ಯ ಮಾಪಕರಾದ ಶ್ರೀ ಮುರಳೀಧರ ಶೆಟ್ಟಿ, ನಿರ್ದೇಶಕರಾದ ಶ್ರೀ ಎಲ್. ಉಮಾನಾಥ, ಶ್ರೀ ವಿನಯ್ ಕುಮಾರ್ ಟಿ.ಎ, ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಲಯನ್ ಜಾರ್ಜ್ ಸ್ಯಾಮ್ಯುಯೆಲ್ ನಿಧನಕ್ಕೆ ಶ್ರದ್ಧಾಂಜಲಿ ಸಭೆ – ನುಡಿನಮನ

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಗತಿಯಲ್ಲಿ ಸದಾ ಮುಂಚೂಣಿಯಲ್ಲಿದ್ದು, ತಮ್ಮ ಅಪಾರ ಅನುಭವ, ಸರಳತೆ ಮತ್ತು ಸಮಾಜಮುಖಿ ಸೇವೆಯಿಂದ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿದ್ದ ಲಯನ್ ಜಾರ್ಜ್ ಸ್ಯಾಮ್ಯುಯೆಲ್ ಅವರ ನಿಧನವು ಸಹಕಾರ ಕ್ಷೇತ್ರ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಸಂಸ್ಥೆಯ ಉಪಾಧ್ಯಕ್ಷರೂ, ಹಿರಿಯ ಲಯನ್ಸ್ ಮುಖಂಡರೂ ಆಗಿದ್ದ ಲಯನ್ ಜಾರ್ಜ್ ಸ್ಯಾಮ್ಯುಯೆಲ್ ಅವರ ನಿಧನದ ಹಿನ್ನೆಲೆಯಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ ವತಿಯಿಂದ ಸಂಸ್ಥೆಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ನುಡಿನಮನ ಸಲ್ಲಿಸಿದರು.

ಅಂಚೆ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿದ್ದ ಲಯನ್ ಜಾರ್ಜ್ ಸ್ಯಾಮ್ಯುಯೆಲ್ ಅವರು, ನಿವೃತ್ತಿಯ ನಂತರವೂ ಲಯನ್ಸ್ ಸಂಸ್ಥೆ, ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಸಮುದಾಯ ಹಾಗೂ ಸೌಹಾರ್ದ ಸಮಿತಿಗಳ ಮೂಲಕ ಹಲವು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸೊಸೈಟಿಯ ನಿರ್ದೇಶಕರಾಗಿ ಹಾಗೂ ಉಪಾಧ್ಯಕ್ಷರಾಗಿ ಆಡಳಿತಾತ್ಮಕವಾಗಿ ಅವರು ನೀಡಿದ ಸಲಹೆ-ಮಾರ್ಗದರ್ಶನಗಳು ಎಂದೆಂದಿಗೂ ಸ್ಮರಣೀಯ ಎಂದು ಅಧ್ಯಕ್ಷರು ಸ್ಮರಿಸಿದರು.

ದಿವಂಗತರ ಸಹೋದ್ಯೋಗಿ ಮಿತ್ರರಾದ ಸೊಸೈಟಿಯ ನಿರ್ದೇಶಕ ಶ್ರೀ ಸದಾಶಿವ ನಾಯ್ಕ್ ಅವರು ನುಡಿನಮನ ಸಲ್ಲಿಸಿ, ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಜಾರ್ಜ್ ಸ್ಯಾಮ್ಯುಯೆಲ್ ಅವರು ತಮ್ಮ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ವ್ಯಕ್ತಿತ್ವದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು. ನಿವೃತ್ತಿಯ ನಂತರವೂ ಅಖಿಲ ಭಾರತ ಅಂಚೆ ಮತ್ತು ಆರ್‌ಎಂಎಸ್ ಪಿಂಚಣಿದಾರರ ಸಂಘದ ಮೂಲಕ ಪಿಂಚಣಿದಾರರ ಸಮಸ್ಯೆಗಳ ಪರಿಹಾರ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಸಕ್ರಿಯವಾಗಿ ಶ್ರಮಿಸಿ ಅನೇಕ ಜನರಿಗೆ ನೆರವಾಗಿದ್ದರು. ಅವರ ಸಮಾಜಮುಖಿ ಚಟುವಟಿಕೆಗಳು, ಮಾರ್ಗದರ್ಶನ ಮತ್ತು ಸೇವಾ ಮನೋಭಾವ ಎಲ್ಲರಿಗೂ ಆದರ್ಶವಾಗಿದ್ದು, ಅವರ ಅಗಲಿಕೆ ವೈಯಕ್ತಿಕವಾಗಿಯೂ ಹಾಗೂ ಸಮಾಜಕ್ಕೂ ಅಪಾರ ನಷ್ಟವಾಗಿದೆ ಎಂದು ನುಡಿದರು.
ಸಭೆಯಲ್ಲಿ ಸೊಸೈಟಿಯ ನಿರ್ದೇಶಕರುಗಳು, ದಿವಂಗತರ ಪುತ್ರ ಶ್ರೀ ರಂಜನ್ ಮನೋಹರ್, ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ವಿ ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್, ಲೆಕ್ಕಿಗರಾದ ಶ್ರೀ ಅಶ್ವಿನಿ ಕುಮಾರ್. ಎಮ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ದಿವಂಗತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡುವಂತೆ ಕೋರಿ ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಸತತ 20ನೇ ಬಾರಿಗೆ ಸಾಧನಾ ಪ್ರಶಸ್ತಿ

ಸಹಕಾರ ಕ್ಷೇತ್ರದಲ್ಲಿ ನಿರಂತರ ಪ್ರಗತಿ ಮತ್ತು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿರುವ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ ಇದರ 2025-26ನೇ ಸಾಲಿನ ಕಾರ್ಯಕ್ಷಮತೆಗಾಗಿ ಸತತ 20ನೇ ಬಾರಿಗೆ  ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿಂದ ನೀಡಲ್ಪಡುವ  ಸಾಧನಾ ಪ್ರಶಸ್ತಿ  ಲಭಿಸಿದೆ. 

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ| ಎಂ . ಎನ್. ರಾಜೇಂದ್ರ ಕುಮಾರ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ ಶೇರಿಗಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ  ಸಂಸ್ಥೆಯ ನಿರ್ದೇಶಕರಾದ ಎಲ್. ಉಮಾನಾಥ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಕೆ.ಆರ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ರಮೇಶ್ ಎಚ್.ಎನ್ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಜಾರ್ಜ್ ಸಾಮ್ಯುಯೆಲ್ ನಿಧನ: ಬಡಗಬೆಟ್ಟು ಸೊಸೈಟಿ ವತಿಯಿಂದ ಸಂತಾಪ

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಉಪಾಧ್ಯಕ್ಷ, ಹಿರಿಯ ಲಯನ್ಸ್ ಮುಖಂಡ ಜಾರ್ಜ್ ಸಾಮ್ಯುಯೆಲ್ (79) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಆ.22 ರಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು

ಉದ್ಯಾವರ ಗುಡ್ಡೆಯಂಗಡಿಯ ನಿವಾಸಿಯಾಗಿದ್ದ ಇವರು, ಲಯನ್ಸ್‌ ಕ್ಲಬ್ ಉದ್ಯಾವರದ ಸಕ್ರಿಯ ಸದಸ್ಯರಾಗಿದ್ದು, ಲಯನ್ಸ್‌ ಜಿಲ್ಲೆ 317C ಇದರ ಮಾಜಿ ಸಂಪುಟ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ, ಪ್ರೊಟೆಸ್ಟೆಂಟ್ ಕ್ರೈಸ್ತ ಸಮುದಾಯದ ಮುಖಂಡರಾಗಿ ವಿವಿಧ ಸಾಮಾಜಿಕ ಹಾಗೂ ಸಮುದಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಸೌಹಾರ್ದ ಸಮಿತಿಯ ಸದಸ್ಯರಾಗಿಯೂ ಹಲವು ವರ್ಷಗಳಿಂದ ಸೇವೆ ನೀಡಿದ್ದರು. ಜಾರ್ಜ್ ಸಾಮ್ಯುಯೆಲ್ ಅವರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಅವರ ನಿಧನಕ್ಕೆ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ  ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ವಯಂಪ್ರೇರಿತ ರಕ್ತದಾನ ಶಿಬಿರ, ನಿವೃತ್ತ ಯೋಧರಿಗೆ ಸನ್ಮಾನ – ಮಲ್ಪೆ

ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ, ರಕ್ತನಿಧಿ ವಿಭಾಗ ಕೆ.ಎಮ್.ಸಿ ಮಣಿಪಾಲ ಮತ್ತು ಜಿಲ್ಲಾಡಳಿತ ಉಡುಪಿ ಜಿಲ್ಲೆ  ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ, ಮಲ್ಪೆ ಘಟಕ ಹಾಗೂ ಮಹಿಳಾ ಸಂಘಟನೆ ಮತ್ತು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿ ಇವರ ನೇತೃತ್ವದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಆಗಸ್ಟ್ 16  ರಂದು ಸರಕಾರಿ ಪದವಿ ಪೂರ್ವ ಕಾಲೇಜು, ಸಭಾಭವನ ಮಲ್ಪೆಯಲ್ಲಿ ಜರಗಿತು.

ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.  ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಶಿಬಿರದ ಉದ್ಘಾಟನೆ ಯನ್ನು ನೆರವೇರಿಸಿ  ಮಾತನಾಡಿ ರಕ್ತದಾನವು  ಅಗತ್ಯವಿರುವ ರೋಗಿಗಳ ಜೀವ ಉಳಿಸುವ ಮಹತ್ವದ ಕಾರ್ಯವಾಗಿದೆ. ಒಬ್ಬ ರಕ್ತದಾನ ಮಾಡುವುದರಿಂದ ನಾಲ್ಕು ಜನರ ಜೀವ ಉಳಿಸಬಹುದು. ಯುವಜನತೆ ರಕ್ತದಾನ ಮಾಡಿದರೆ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಆಸ್ಪತ್ರೆಯವರು ಒದಗಿಸಲು ಸಾಧ್ಯ. ಆ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವ ಸಂಘಟನೆ ನಿರಂತರವಾಗಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ  ನಿವೃತ್ತ ಯೋಧರಾದ ಸಂತೋಷ್ ಶ್ರೀಯಾನ್ ಇವರನ್ನು ಸನ್ಮಾನಿಸಲಾಯಿತು.ಮಲ್ಪೆ ಮಹಿಳಾ ಸಂಘಟನೆಯ ಅಧ್ಯಕ್ಷೆ ಸಂಪ್ರೀತಾ ರೋಹಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ರವೀಶ್ ಕೊರವಡಿ, ನಿಕಟಪೂರ್ವ ಅಧ್ಯಕ್ಷರಾದ ಜಯಂತ್ ಅಮೀನ್, ಕಾರ್ಯದರ್ಶಿ ಶೇಖರ್ ತೋಳಾರ್, ರೋಟರಿ ಮಲ್ಪೆ ಕರಾವಳಿಯ ಅಧ್ಯಕ್ಷರಾದ  ಸುರೇಶ್ ಕರ್ಕೇರ, ರೋಟರಿ ಕಲ್ಯಾಣಪುರದ ಮಾಜಿ ಅಧ್ಯಕ್ಷರಾದ ರಾಮ ಪೂಜಾರಿ, ಹನುಮಾನ್ ವಿಠೋಭ ಭಜನಾ ಮಂದಿರದ ಅಧ್ಯಕ್ಷರಾದ ರವಿ ಕಾಂಚನ್,ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಶೇರಿಗಾರ್, ಕೆ. ಎಮ್. ಸಿ. ಮಣಿಪಾಲದ ಡಾ. ಓಜಸ್ವಿ ಉಪಸ್ಥಿತರಿದ್ದರು. ಬಡಗಬೆಟ್ಟು ಸೊಸೈಟಿ ಮಲ್ಪೆ ಶಾಖಾ ಮುಖ್ಯಸ್ಥರಾದ ನವೀನ್ ಕೆ. ಸ್ವಾಗತಿಸಿ,ಮಹೇಶ್ ಕುಮಾರ್ ವಂದಿಸಿದರು. ಯಶೋದ ಕೇಶವ್ ಕಾರ್ಯಕ್ರಮ ನಿರೂಪಿಸಿದರು.

ಸಂಭ್ರಮದ 80ನೇ ಸ್ವಾತಂತ್ರ್ಯ ದಿನಾಚರಣೆ

ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾಜಿ ಸೈನಿಕರಾದ ಕರ್ನಲ್ (ಡಾ.) ಫ್ರಾನ್ಸಿಸ್ ಇ. ಎ. ರೊಡ್ರಿಗಸ್ ಅವರು ಧ್ವಜಾರೋಹಣ ನೆರವೇರಿಸಿ, ದೇಶದ ಕಾನೂನುಗಳನ್ನು ಪಾಲಿಸುವುದರೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು ಎಂಬ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಸೊಸೈಟಿಯ ವತಿಯಿಂದ ಗೌರವಿಸಲಾಯಿತು.

ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಅವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿ, ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯ ಮಹತ್ವವನ್ನು ವಿವರಿಸಿದರು. ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯಿಂದ ನಿರ್ವಹಿಸುವಂತೆ ಕರೆ ನೀಡಿದರು.

ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ ಜಾರ್ಜ್ ಸ್ಯಾಮ್ಯುಯೆಲ್, ಶತಮಾನೋತ್ಸವ ಸಮಿತಿ ಸಂಚಾಲಕರಾದ ಶ್ರೀ ಪುರುಷೋತ್ತಮ ಪಿ. ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಶಾಖಾ ಸಲಹಾ ಸಮಿತಿ ಸದಸ್ಯರು ಹಾಗೂ ದೈನಿಕ ಠೇವಣಿ ಸಂಗ್ರಾಹಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ವಿ. ಶೇರಿಗಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್ ಅವರು ವಂದನಾರ್ಪಣೆ ಸಲ್ಲಿಸಿದರು. ಮಲ್ಪೆ ಶಾಖಾ ವ್ಯವಸ್ಥಾಪಕರಾದ ಶ್ರೀ ನವೀನ್ ಕೆ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು

ಶಿರ್ವ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ

ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಹಭಾಗಿತ್ವದಲ್ಲಿ, ಶಿರ್ವ ಅಟ್ಟಿಂಜೆ ದಿ| ಶಂಭು ಶೆಟ್ಟಿ ಅವರ ಸ್ಮರಣಾರ್ಥ ಶಿರ್ವ ಬಂಟರ ಸಂಘದ ನೇತೃತ್ವದಲ್ಲಿ ಉಡುಪಿ ಜಿಲ್ಲಾಸ್ಪತ್ರೆ ಹಾಗೂ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವು ಆ.9 ರಂದು ಶಿರ್ವ ಕೊಲ್ಲಬೆಟ್ಟು ಸಂಘಮಿತ್ರ ಹಾಲ್‌ನಲ್ಲಿ ನಡೆಯಿತು.

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ವಿ. ಶೇರಿಗಾರ್ ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ಡಾ| ವೀಣಾ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.

ಸಮಾಜ ಸೇವಕ ಮನೋಹರ ಶೆಟ್ಟಿ ಮಂದಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಮಾಜಮುಖಿಯಾಗಿ ಸಾರ್ಥಕ ಬದುಕನ್ನು ಸಾಗಿಸಿದ ದಿ| ಶಂಭು ಶೆಟ್ಟಿ ಅವರ ಸ್ಮರಣಾರ್ಥ ಪರಿಸರದ ಸಂಘ ಸಂಸ್ಥೆಗಳು ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ಉಡುಪಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, 90 ವರ್ಷಗಳ ಸಾರ್ಥಕ ಜೀವನ ನಡೆಸಿ ಸಮಾಜಕ್ಕಾಗಿ ತನ್ನದೇ ಆದ ಕೊಡುಗೆಯನ್ನು ನೀಡಿದ ಶಂಭು ಶೆಟ್ಟಿಯವರ ಸ್ಮರಣಾರ್ಥ ನಡೆದ ಶಿಬಿರದ ಪ್ರಯೋಜನವನ್ನು ರಕ್ತದ ಅಗತ್ಯತೆ ಇದ್ದವರು ಪಡೆಯುವಂತಾಗಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿರ್ವ ಬಂಟರ ಸಂಘದ ಅಧಕ್ಷ ಕುತ್ಯಾರು ಸಾಯಿನಾಥ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ದಿ| ಶಂಭು ಶೆಟ್ಟಿ ಅವರ ಪತ್ನಿ ಹೇಮಲತಾ ಶಂಭು ಶೆಟ್ಟಿ ಮತ್ತು ಮಕ್ಕಳು, ಮಾಜಿ ಉಡುಪಿ ನಗರಸಭಾಧ್ಯಕ್ಷ ಕಿರಣ್ ಕುಮಾರ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ರಕ್ತದಾನಿಗಳಿಂದ ಒಟ್ಟು 126 ಯುನಿಟ್ ರಕ್ತ ಸಂಗ್ರಹವಾಯಿತು.

ಉಚಿತ ಆರೋಗ್ಯ ತಪಾಸಣಾ ಶಿಬಿರ -2026

ಬ್ಯಾಂಕ್​, ಸಹಕಾರಿ ಸಂಘಗಳು ಕೇವಲ ಆರ್ಥಿಕ ವ್ಯವಹಾರಕ್ಕೆ ಮಾತ್ರ ಸೀಮಿತವಾಗಬಾರದು. ಸಾರ್ವಜನಿಕರೊಂದಿಗೆ ಬೆರೆಯುವ, ಜನರು ಸಂಕಷ್ಟದಲ್ಲಿದ್ದಾಗ ಸ್ಪಂದಿಸುವ ಕಾರ್ಯವೂ ಆಗಬೇಕು. ಪರಿಸರರಕ್ಷಣೆಯೊಂದಿಗೆ ಪ್ರಕೃತಿಗೆ ಕೊಡುಗೆ ನೀಡಬೇಕು, ಆರೋಗ್ಯ, ಶೈಕ್ಷಣಿಕ ಕ್ಷೇತ್ರದ ಅಬಿವೃದ್ಧಿಗೆ ಸಹಕಾರ ನೀಡಬೇಕು. ಆ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಬಡಗಬೆಟ್ಟು ಸೊಸೈಟಿಯ ಹಾಗೂ ಜಿಲ್ಲಾ ಸಹಕಾರ ಯೂನಿಯನ್​ನ ಅಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಉಡುಪಿ ನಗರದಲ್ಲಿರುವ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಮಿನಿ ಹಾಲ್​ನಲ್ಲಿ ಉಡುಪಿಯ ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಸಹಕಾರದಲ್ಲಿ ಭಾನುವಾರ (ಜು.5) ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಕೇಂದ್ರ ಸರಕಾರದ ಸಹಕಾರ ಸಚಿವಾಲಯ ಐದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ‘ಸಹಕಾರದಿಂದ ಸಮೃದ್ಧಿ’ ಧ್ಯೇಯದೊಂದಿಗೆ ಹಾಗೂ ಸಹಕಾರ ಸಪ್ತಾಹ ಆಚರಣೆ ನಿಮಿತ್ತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಡುಪಿ ಶ್ರೀಸಿದ್ಧಿ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ್​ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. 

ಹಿರಿಯ ವಕೀಲ ಶಾಂತಾರಾಮ್ ಶೆಟ್ಟಿ, ಗುರು ನಿತ್ಯಾನಂದ ಕೋ-ಆರಪೇಟಿವ್ ಸೊಸೈಟಿಯ ಅಧ್ಯಕ್ಷ ಸುರೇಶ್ ಶೆಟ್ಟಿ, ಜಿಲ್ಲಾ ಸಹಕಾರ ಯೂನಿಯನ್ನ ಸಿಇಒ ಅನೂಷಾ ಕೋಟ್ಯಾನ್ ಮಾತನಾಡಿದರು. 

ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಬಡಗಬೆಟ್ಟು ಸೊಸೈಟಿಯ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ನಿರ್ದೇಶಕರಾದ ಜಯಾ ಶೆಟ್ಟಿ, ಸದಾಶಿವ್ ನಾಯ್ಕ್, ವಿನಯ ಕುಮಾರ್, ಪದ್ಮನಾಭ ನಾಯಕ್, ಎಲ್.ಉಮಾನಾಥ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಇತರರು ಉಪಸ್ಥಿತರಿದ್ದರು.

ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಸ್ವಾಗತಿಸಿದರು. ಮಲ್ಪೆ ಶಾಖೆಯ ವ್ಯವಸ್ಥಾಪಕ ನವೀನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿ ಪ್ರಸಾದ್​ ನೇತ್ರಾಲಯ, ನೇತ್ರ ಜ್ಯೋತಿ ಚಾರಿಟೇಬಲ್​ ಟ್ರಸ್ಟ್​ ಹಾಗೂ ಮೆಡಿಕ್ವೆಸ್ಟ್​ ಹೆಲ್ತ್​ಕೇರ್​ ವತಿಯಿಂದ ಉಚಿತವಾಗಿ ನೇತ್ರ ತಪಾಸಣೆ, ಫಿಸಿಯೋಥೆರಪಿ, ಬ್ಲಡ್​ ಶುಗರ್​ ಟೆಸ್ಟ್​ ಮಾಡಲಾಯಿತು. ನೂರಾರು ಮಂದಿ ಪ್ರಯೋಜನ ಪಡೆದರು.

ದೇಹದಲ್ಲಿ ಕಣ್ಣು ಪ್ರಮುಖ ಅಂಗವಾಗಿದ್ದು, ಎಲ್ಲ ವಯೋಮಾನದವರೂ ಸಹ ವರ್ಷಕ್ಕೆ ಒಮ್ಮೆಯಾದರೂ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿನಲ್ಲಿ ಸಮಸ್ಯೆ ಇದ್ದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ. ನಿಟ್ಟಿನಲ್ಲಿ ಇಂತಹ ಶಿಬಿರಗಳು ತುಂಬ ಪ್ರಯೋಜನಕಾರಿ. ನೇತ್ರದಾನವೂ ಸಹ ಎಲ್ಲ ದಾನಗಳಂತೆ ಪ್ರಮುಖವಾದುದಾಗಿದ್ದು, ಮರಣದ ನಂತರ ತಮ್ಮ ಕಣ್ಣನ್ನು ಬೇರೆಯವರಿಗೆ ದಾನಮಾಡಿ ಅವರ ಬಾಳಿನಲ್ಲಿ ಬೆಳಕಾಗಬೇಕು.

ಡಾ.ಮೇಘನಾ. ಉಡುಪಿ ಪ್ರಸಾದ್ನೇತ್ರಾಲಯದ ನೇತ್ರತಜ್ಞೆ.

ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಸಸಿ ವಿತರಣೆ ಕಾರ್ಯಕ್ರಮ -2026

ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಉಡುಪಿ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಸುಮಾರು ₹20 ಲಕ್ಷ ಮೌಲ್ಯದ ನೋಟ್‌ಪುಸ್ತಕಗಳು, ಶೈಕ್ಷಣಿಕ ಪರಿಕರಗಳು, ಪ್ರತಿಭಾ ಪುರಸ್ಕಾರಗಳು ಹಾಗೂ ಸಸಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತ ಸ್ಕೌಟ್ಸ್ ಆಂಡ್ ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರು, ಭಾರತದಲ್ಲಿ ಸಹಕಾರಿ ಕ್ಷೇತ್ರವು ವಾಣಿಜ್ಯ ಬ್ಯಾಂಕ್‌ಗಳಿಗೆ ಸಮಾನಾಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ಬಡಗಬೆಟ್ಟು ಸೊಸೈಟಿ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳ 24 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 5 ಲಕ್ಷ ರೂ.ಕ್ಕೂ ಅಧಿಕ ಸಹಾಯಧನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲೆಯ 45 ಕನ್ನಡ ಮಾಧ್ಯಮ ಶಾಲೆಗಳಿಗೆ ಉಚಿತ ನೋಟ್ ಪುಸ್ತಕಗಳು, 8 ಶಾಲೆಗಳಿಗೆ ಸಮವಸ್ತ್ರಗಳು, ಆರು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿಗೆ ಕಂಪ್ಯೂಟರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಯಿತು. ಶಾಲಾ ಶಿಕ್ಷಕರಿಗೆ ಕೊಡೆಗಳನ್ನೂ ವಿತರಿಸಲಾಯಿತು.

ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸೊಸೈಟಿಯ ನಿರ್ದೇಶಕರಾದ ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ, ಉಮಾನಾಥ್, ಜಯ ಶೆಟ್ಟಿ, ಗಾಯತ್ರಿ ಭಟ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಹಾಗೂ ಸಹಾಯಕ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ. ಮತ್ತು ಕುಂದಾಪುರ ಶಾಖಾ ವ್ಯವಸ್ಥಾಪಕ ಸಮರ್ಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ, ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕಾಮತ್ ಹಾಗೂ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಭಾಗವಹಿಸಿ ಮಾತನಾಡಿದರು. ವಿದ್ವಾನ್ ದಾಮೋದರ್ ಶರ್ಮ ಬಾರಕೂರು ವಿಶೇಷ ಉಪನ್ಯಾಸ ನೀಡಿದರು.

12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ -21st June 2026

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಜಯಕರ ಶೆಟ್ಟಿ ಇಂದ್ರಾಳಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪತಂಜಲಿ ಯೋಗ ಪೀಠ (ಹರಿದ್ವಾರ), ಉಡುಪಿ ಜಿಲ್ಲೆ ಇದರ ಸದಾನಂದ ಶೆಟ್ಟಿಯವರು ಯೋಗ ತರಬೇತಿಯನ್ನು ನೀಡಿದರು. ಪತಂಜಲಿ ಯೋಗ ಪೀಠದ ಮಲ್ಲಿಕಾ ಶೆಟ್ಟಿ, ಸಂಘದ ಸಿಬ್ಬಂದಿ ಭಾರತಿ ಪಿ. ಹೆಗ್ಡೆ ಯೋಗ ಪ್ರಾತ್ಯಕ್ಷಿಕೆ ನೀಡಿದರು.
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್, ಲೆಕ್ಕಿಗರಾದ ಅಶ್ವಿನಿ ಕುಮಾರ್ ಎಮ್, ಸಂಘದ ನಿರ್ದೇಶಕ ಮಂಡಳಿ ಸದಸ್ಯರು, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಮತ್ತು ದೈನಿಕ ಠೇವಣಿ ಸಂಗ್ರಾಹಕರು ಯೋಗಾಭ್ಯಾಸ ನಡೆಸಿದರು.
ಸಂಘದ ಮಲ್ಪೆ ಶಾಖಾ ವ್ಯವಸ್ಥಾಪಕರಾದ ನವೀನ್ ಕೆ ಕಾರ್ಯಕ್ರಮ ನಿರೂಪಿಸಿದರು.