Badagabettu Society

ವನಮಹೋತ್ಸವ ಸಂಭ್ರಮ -2026

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ, ಉಡುಪಿ ಹಾಗೂ ಸಹಕಾರ ಇಲಾಖೆಯ ಉಡುಪಿ ಜಿಲ್ಲಾ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಅಂಗವಾಗಿ ಮಣಿಪಾಲ ಪ್ರಗತಿ  ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಡಾ.ವಿ ಎಸ್ ಆಚಾರ್ಯ ಜಿಲ್ಲಾ ಕೇಂದ್ರ ತರಬೇತಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಮತ್ತು ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ ಅಧ್ಯಕ್ಷ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯ ಕ್ರಮದಲ್ಲಿ ಲಯನ್ ಪಿಡಿಜಿ ಎನ್.ಎಂ ಹೆಗ್ಡೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಖಜಾಂಚಿ ಹರಿಪ್ರಸಾದ್ ರೈ, ಜಿಲ್ಲಾ ಕಾರ್ಯದರ್ಶಿ ಆನಂದ ಬಿ. ಅಡಿಗ, ರಾಜ್ಯ ಸಹಾಯಕ ಆಯಿಕ್ತೆ ಸುಮನಾ ಶೇಖರ್, ಅಲೆವೂರು ಗ್ರಾಮ ಪಂಚಾಯತ್ನ ಅಧ್ಯಕ್ಷ ಯತೀಶ್ ಕುಮಾರ್, ಯೋಗ ಶಿಕ್ಷಕಿಯರಾದ ಚೆನ್ನಮ್ಮ ಉಡುಪ ಹಾಗೂ ಶೋಭಾ ಶೆಟ್ಟಿ, ಉಡುಪಿ ಗೈಡ್ ಕಮೀಶನರ್ ಜ್ಯೋತಿ ಪೈ, ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು

ಕಾರ್ಯಕ್ರಮದ ನಿರೂಪಣೆಯನ್ನು ಬಡಗಬೆಟ್ಟು ಸೊಸೈಟಿಯ ಮ್ಯಾನೇಜರ್ ಶ್ರೀ ನವೀನ್ ಕೆ. ನೆರವೇರಿಸಿದರು. ಶ್ರೀಮತಿ ಅನುಷಾ ಕೋಟ್ಯಾನ್ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಶ್ರೀ ಪ್ರವೀಣ್ ಕುಮಾರ್ ವಂದಿಸಿದರು.

ಬೈಲೂರು: ವಿಶ್ವ ಪರಿಸರ ದಿನಾಚರಣೆ-ಚಿತ್ರಕಲಾ ಸ್ಪರ್ಧೆ

ವನಮಹೋತ್ಸವ ಕಾರ್ಯಕ್ರಮ

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಪರಿಸರ ಪ್ರೇಮಿಗಳು ಬೈಲೂರು, ಕಲಾಕಿರಣ್ ಕ್ಲಬ್ ಬೈಲೂರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಡುಪಿ, ಬೈಲೂರು ಮಹಿಷಮರ್ದಿನಿ ದೇವಸ್ಥಾನದ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ “ಹಸಿರು ನನ್ನೂರು ಬೈಲೂರು” ಗಿಡನೆಡುವ ಸಂಕಲ್ಪ…. ಹಸಿರು ಪರಿಸರ ನಿರ್ಮಿಸುವ ಕಾಯಕಲ್ಪ… ಎನ್ನುವಂತೆ ಗಿಡನೆಡುವ ಕಾರ್ಯಕ್ರಮ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಡುಪಿ ಇದರ ವಠಾರದಲ್ಲಿ ಜರಗಿತು. ಬಡಗಬೆಟ್ಟು ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರು ಗಿಡನೆಡುವ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್, ಪಶುಸಂಗೋಪನಾ ಇಲಾಖೆಯ ಡಾ. ಪ್ರಶಾಂತ್ ಶೆಟ್ಟಿ, ಎಸ್.ವಿ.ಸಿ ಬ್ಯಾಂಕಿನ ನಿರ್ದೇಶಕರಾದ ಸತೀಶ್ ಟಿ, ಕಲಾಕಿರಣ್ ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಸುಭಾಷ್ ಕೆ, ಕಾರ್ಯಕ್ರಮದ ಸಂಚಾಲಕರಾದ ವೆಂಕಟೇಶ್ ಪ್ರಭು, ದುರ್ಗಾಪ್ರಸಾದ್, ನವೀನ್ ನಿಶ್ಚಲ್  ಇನ್ನಿತರರು ಉಪಸ್ಥಿತರಿದ್ದರು.

ಚಿತ್ರಕಲಾ ಸ್ಪರ್ಧೆ

ದಿನಾಂಕ 07-06-2026 ರಂದು ಬೈಲೂರು ದೇವಸ್ಥಾನದ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಸಿರು ನನ್ನೂರು ಬೈಲೂರು- ಚಿತ್ರಕಲಾ ಸ್ಪರ್ಧೆ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರವನ್ನು ಉದ್ಘಾಟಿಸಿ ಉತ್ತಮ ಪರಿಸರಕ್ಕೆ ನಮ್ಮ ಕೊಡುಗೆ ಏನು ಎನ್ನುವ ಬಗ್ಗೆ ವಿವರಿಸಿದರು ಹಾಗೂ ಪರಿಸರದ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿ ತಿಳಿದುಕೊಳ್ಳುವಂತೆ ಪೋಷಕರು ಮಕ್ಕಳಿಗೆ ಮನೆಯಲ್ಲಿ ಈ ಬಗ್ಗೆ ತಿಳಿಸಬೇಕೆಂದು ವಿನಂತಿಸಿದರು.  ಡಾ.ಯು.ಮುನಿಯಲ್ ಮೆಮೋರಿಯಲ್ ಟ್ರಸ್ಟ್ ನ ಟ್ರಸ್ಟಿ, ಡಾ.ಕೃಷ್ಣಾ ಲೈಫ್ ಸೈನ್ಸ್ ಲಿ., ಮುನಿಯಾಲ್ ಆಯುರ್ವೇದದ ಡೈರೆಕ್ಟರ್ ಡಾ.ಶ್ರದ್ಧಾ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಪರಿಸರ ಕಾಳಜಿಯ ಕುರಿತು ಮಾಹಿತಿ ಹಂಚಿಕೊಂಡರು.  ಸಭಾ ವೇದಿಕೆಯಲ್ಲಿ ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆ ಉಡುಪಿಯ ಉಪನಿರ್ದೇಶಕರಾದ ಡಾ| ಎಂ.ಸಿ ರೆಡ್ಡಪ್ಪ. ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಶ್ರೀ ಮೋಹನ ಮುದ್ದಣ್ಣ ಶೆಟ್ಟಿ, ಎಸ್.ವಿ.ಸಿ ಬ್ಯಾಂಕಿನ ಡೈರೆಕ್ಟರ್ ಶ್ರೀ ಸತೀಶ್ ರಾವ್, ಕಲಾಕಿರಣ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಸಭಾ ವೇದಿಕೆಯಲ್ಲಿ ಬಹುಮಾನವನ್ನು ವಿತರಿಸಲಾಯಿತು. ಬಡಗಬೆಟ್ಟು ಸೊಸೈಟಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀ ದುರ್ಗಾಪ್ರಸಾದ್ ವಂದಿಸಿದರು.

ಕುಂದಾಪುರ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 12ನೇ ಶಾಖೆ ಉದ್ಘಾಟನೆ

ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕುಗಳು ವಿಲೀನಗೊಂಡು ಸ್ಥಳೀಯ ಬ್ಯಾಂಕ್‌ಗಳ ಅಸ್ತಿತ್ವ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಜನಸಾಮಾನ್ಯರಿಗೆ ಅಗತ್ಯವಾದ ಸೇವೆಗಳನ್ನು ನೀಡುವಲ್ಲಿ ಸಹಕಾರಿ ಸಂಸ್ಥೆಗಳು ದೇಶದಲ್ಲೇ ಅಗ್ರಗಣ್ಯ ಸ್ಥಾನ ಪಡೆದಿವೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.

ಅವರು ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ ಇದರ ಸಂಪೂರ್ಣ ಹವಾನಿಯಂತ್ರಿತ 12ನೇ ಶಾಖೆಯನ್ನು ಕುಂದಾಪುರದ ಮುಖ್ಯರಸ್ತೆಯ ಪಾರಿಜಾತ ಹೋಟೆಲ್ ಸಮೀಪದ ಶ್ರೀ ನಂದಿಕೇಶ್ವರ ಟವರ್ಸ್ನಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ರಾಜ್ಯದಲ್ಲೇ ವಿಶಿಷ್ಟ ಸ್ಥಾನವಿದ್ದು, ಜನರ ಆರ್ಥಿಕ ಬೆಳವಣಿಗೆಯೊಂದಿಗೇ ಸಹಕಾರಿ ಕ್ಷೇತ್ರವೂ ಬೆಳೆಯುತ್ತಿದೆ ಎಂದರು.

ಜಯಕರ ಶೆಟ್ಟಿ ಹಾಗೂ ತಂಡದ ಪರಿಶ್ರಮ ಶ್ಲಾಘನೀಯ

ಸಂಸ್ಥೆ ಆರಂಭಿಸುವುದು ಸುಲಭವಾದರೂ ಅದನ್ನು ಲಾಭದಾಯಕವಾಗಿ ಮುನ್ನಡೆಸುವುದು ದೊಡ್ಡ ಸವಾಲು. ಸಹಕಾರಿ ಸಂಸ್ಥೆಗಳ ಬೆಳವಣಿಗೆಯಲ್ಲಿ ಸಿಬ್ಬಂದಿಗಳ ಜನಸ್ನೇಹಿ ಕಾರ್ಯವೈಖರಿ ಅತ್ಯಂತ ಮುಖ್ಯವಾಗಿದೆ. ಶತಮಾನಕ್ಕೂ ಅಧಿಕ ಇತಿಹಾಸವಿರುವ ಬಡಗಬೆಟ್ಟು ಸೊಸೈಟಿ ಕಳೆದ 35 ವರ್ಷಗಳಿಂದ ಜನರ ವಿಶ್ವಾಸ ಗಳಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದರ ಹಿಂದೆ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಅವರ ತಂಡದ ಪರಿಶ್ರಮ ಇದೆ ಎಂದು ಡಾ. ರಾಜೇಂದ್ರ ಕುಮಾರ್ ಶ್ಲಾಘಿಸಿದರು.

ಸಹಕಾರಿ ಸಂಘ ಬೆಳವಣಿಗೆಗೆ ಮಾದರಿ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶತಮಾನದ ಇತಿಹಾಸ ಹೊಂದಿರುವ ಈ ಸಹಕಾರಿ ಸಂಘವನ್ನು ಜಯಕರ ಶೆಟ್ಟಿಯವರು ಸಮರ್ಥವಾಗಿ ಕಟ್ಟಿಬಳೆಸಿದ್ದು, ಸಹಕಾರಿ ಸಂಸ್ಥೆಯನ್ನು ಯಾವ ರೀತಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಬಹುದು ಎಂಬುದಕ್ಕೆ ಇದು ಉತ್ತಮ ನಿದರ್ಶನವಾಗಿದೆ ಎಂದರು.

ಜನಪರ ಸೇವೆಗೆ ಒತ್ತು

ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಹಕಾರಿ ಸಂಘಗಳು ಇಂದು ವಾಣಿಜ್ಯ ಬ್ಯಾಂಕುಗಳಿಗೆ ಸಮಾನಾಂತರವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚು ಸಮೀಪವಾಗಿವೆ ಎಂದರು.

ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಹಿಂದೆ ಸಹಕಾರಿ ಕ್ಷೇತ್ರಕ್ಕೆ ವ್ಯಾಪ್ತಿಯ ಮಿತಿ ಇದ್ದರೂ ಈಗ ಅದು ಎಲ್ಲೆಡೆ ವಿಸ್ತರಿಸಿದೆ. ಜನರಿಗೆ ಇನ್ನಷ್ಟು ಆಕರ್ಷಕ ಸೇವೆ ಒದಗಿಸುವ ಅಗತ್ಯವಿದ್ದು, ಶಿಕ್ಷಣಕ್ಕಾಗಿ ಭದ್ರತೆ ರಹಿತ ಸಾಲ ಸೌಲಭ್ಯಗಳಂತಹ ಯೋಜನೆಗಳನ್ನು ಸಹಕಾರಿ ಸಂಘಗಳು ಆರಂಭಿಸಬೇಕು ಎಂದು ಸಲಹೆ ನೀಡಿದರು. ಸರ್ಕಾರದ ಮಟ್ಟದಲ್ಲಿ ಸಾಲದ ಬಡ್ಡಿದರ ಇಳಿಕೆಯ ಕುರಿತು ಚರ್ಚಿಸಿದರೆ ರೈತರು ಮತ್ತು ಯುವ ಸಮೂಹಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

18.13 ಕೋಟಿ ರೂ. ಲಾಭ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, 107 ವರ್ಷಗಳ ಇತಿಹಾಸವಿರುವ ಸಂಘವು ಹಲವು ಏಳು-ಬೀಳುಗಳನ್ನು ಎದುರಿಸಿದರೂ ಕಳೆದ ಮೂರು ದಶಕಗಳಿಂದ ಲಾಭದಾಯಕವಾಗಿ ಮುನ್ನಡೆಯುತ್ತಾ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.

ಪ್ರಸ್ತುತ ಸಂಘದಲ್ಲಿ 23 ಸಾವಿರ ಸದಸ್ಯರಿದ್ದು, 662 ಕೋಟಿ ರೂ. ಠೇವಣಿ, 528 ಕೋಟಿ ರೂ. ಹೊರಬಾಕಿ ಸಾಲ, 113.24 ಕೋಟಿ ರೂ. ನಿಧಿ, 284.07 ಕೋಟಿ ರೂ. ಹೂಡಿಕೆ ಹಾಗೂ 795 ಕೋಟಿ ರೂ. ದುಡಿಯುವ ಬಂಡವಾಳವಿದೆ. 2025-26ನೇ ಸಾಲಿನಲ್ಲಿ 4062.29 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ 18.13 ಕೋಟಿ ರೂ. ಲಾಭ ಗಳಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಸಹಕಾರವೇ ಕಾರಣ ಎಂದರು.

ಗೌರವ ಸನ್ಮಾನ

ಈ ಸಂದರ್ಭದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನೂತನ ಶಾಖೆಯ ಪ್ರಥಮ ಗ್ರಾಹಕರಿಗೆ ಖಾತೆ ಪಾಸ್‌ಬುಕ್ ಹಾಗೂ ಠೇವಣಿ ಪತ್ರ ವಿತರಿಸಲಾಯಿತು. ಇಂಜಿನಿಯರ್ ಮುರಳೀಧರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಟ್ಟಡದ ಮಾಲೀಕರಾದ ಜಿ. ಸುರೇಶ್ ಹಾಗೂ ಜಿ. ಉದಯ ಅವರನ್ನು ಗುರುತಿಸಲಾಯಿತು.

ಉಡುಪಿ ಶಾಸಕ ಯಶಪಾಲ್ ಸುವರ್ಣ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ ಮೊಳಹಳ್ಳಿ, ಜಿಲ್ಲಾ ಸಹಕಾರಿ ಉಪನಿಬಂಧಕರಾದ ಲಾವಣ್ಯ ಕೆ.ಆರ್., ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ., ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಸಮರ್ಥ್ ಶೆಟ್ಟಿ ವಂದಿಸಿದರು.

2025-26 ನೇ ಸಾಲಿನಲ್ಲಿ 18.13 ಕೋ.ರೂ ಲಾಭ

ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾದ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಸಾಲಿನಲ್ಲಿ ರೂ. 4062.29 ಕೋಟಿ ವಾರ್ಷಿಕ ವಹಿವಾಟು ನಡೆಸಿ ರೂ. 18.13 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೂ.1192.75 ಕೋಟಿ ವ್ಯವಹಾರ - ದಾಖಲೆ ಸಾಧನೆ

ಸಹಕಾರ ಕ್ಷೇತ್ರದಲ್ಲಿ 108 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಸಂಘವು, 2025-26ನೇ ಆರ್ಥಿಕ ವರ್ಷಾಂತ್ಯಕ್ಕೆ 22,869 ಸದಸ್ಯರನ್ನು ಹೊಂದಿದ್ದು, ವರದಿ ವರ್ಷಾಂತ್ಯಕ್ಕೆ ರೂ. 658.80 ಕೋಟಿ ಠೇವಣಿ ಸಂಗ್ರಹಿಸಿ, ಕಳೆದ ಸಾಲಿಗಿಂತ ಶೇ.14.93ರಷ್ಟು ಏರಿಕೆ ಸಾಧಿಸಿದೆ. ಸದಸ್ಯರಿಗೆ ಗೃಹನಿರ್ಮಾಣ, ವಾಹನ ಖರೀದಿ, ಜಮೀನು ಖರೀದಿ ಮತ್ತು ಅಭಿವೃದ್ಧಿ, ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯ ನಿರ್ಮಾಣ, ಸ್ವಉದ್ಯೋಗ, ವಿದ್ಯಾಭ್ಯಾಸ, ಮದುವೆ, ಚಿನ್ನಾಭರಣಗಳ ಈಡಿನ ಮೇಲೆ ಹಾಗೂ ಮನೆವಾರ್ತೆಗಳಿಗೆ ಅಗತ್ಯ ದಾಖಲೆಗಳನ್ನು ಪಡೆದು ಸಾಲ ವಿತರಿಸಲಾಗುತ್ತಿದೆ.

ವರದಿ ವರ್ಷಾಂತ್ಯಕ್ಕೆ ಸದಸ್ಯರ ಹೊರಬಾಕಿ ಸಾಲ ರೂ. 533.96 ಕೋಟಿ ಆಗಿದ್ದು, ಇದು ಕಳೆದ ಸಾಲಿಗಿಂತ ಶೇ. 11.94ರಷ್ಟು ಏರಿಕೆಯಾಗಿದೆ. ಸಂಘವು ರೂ. 117.60 ಕೋಟಿ ನಿಧಿಗಳು ಹಾಗೂ ರೂ. 268.30 ಕೋಟಿ ಹೂಡಿಕೆಗಳನ್ನು ಹೊಂದಿದ್ದು, ಒಟ್ಟು ರೂ. 791.46 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ.

ಕುಂದಾಪುರದಲ್ಲಿ 12ನೇ ಶಾಖೆ ಶೀಘ್ರ ಆರಂಭ

ಸಂಘವು ತನ್ನ ಕಾರ್ಯಕ್ಷೇತ್ರದಲ್ಲಿ 11 ಶಾಖೆಗಳನ್ನು ಹೊಂದಿದ್ದು, ಇವುಗಳಲ್ಲಿ 8 ಶಾಖೆಗಳು ಸಂಘದ ಸ್ವಂತ ನಿವೇಶನಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಂಘದ 12ನೇ ಶಾಖೆಗಾಗಿ ಕುಂದಾಪುರದ ಹೃದಯಭಾಗದಲ್ಲಿ ಸ್ವಂತ ಕಚೇರಿ ಖರೀದಿಸಲಾಗಿದ್ದು, ಅದರ ಕಾಮಗಾರಿ ಅಂತಿಮ ಹಂತದಲ್ಲಿದೆ. ಅಗತ್ಯ ಸೌಲಭ್ಯಗಳೊಂದಿಗೆ ಶಾಖೆಯು ಶೀಘ್ರದಲ್ಲೇ ಗ್ರಾಹಕರ ಸೇವೆಗೆ ಸಿದ್ಧವಾಗಲಿದೆ.

ಪ್ರಶಸ್ತಿಗಳು ಮತ್ತು ಸಾಮಾಜಿಕ ಸೇವೆ

ಸಂಘವು 2 ಬಾರಿ ರಾಷ್ಟ್ರ ಪ್ರಶಸ್ತಿ, 9 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ 19 ಬಾರಿ ಅವಿಭಜಿತ ದ.ಕ ಜಿಲ್ಲಾ ಪ್ರಶಸ್ತಿಗಳನ್ನು ಪಡೆದು ಯಶಸ್ವಿ ಕ್ರೆಡಿಟ್ ಸಹಕಾರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ವ್ಯವಹಾರ ಲಾಭದೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ಸಂಘವು ಪ್ರತಿವರ್ಷ ಸುಮಾರು ರೂ. 25 ಲಕ್ಷವನ್ನು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಿಡುತ್ತಿದೆ.

ಸಹಕಾರ ಮಾಣಿಕ್ಯ ಪ್ರಶಸ್ತಿ

72ನೇ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸಂಘಕ್ಕೆ ‘ಸಹಕಾರ ಮಾಣಿಕ್ಯ’ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯೊಂದಿಗೆ ನಗದು ಬಹುಮಾನ ಹಾಗೂ 5 ಗ್ರಾಂ ಬಂಗಾರದ ಪದಕ ಪಡೆದಿದೆ. ಸಹಕಾರ ಕ್ಷೇತ್ರದಲ್ಲಿ ಸಂಘದ ಉತ್ತಮ ಸೇವೆ, ನಿರ್ವಹಣೆ ಹಾಗೂ ಸಾಧನೆಯನ್ನು ಪರಿಗಣಿಸಿ ಈ ಗೌರವ ದೊರೆತಿದ್ದು, ಉಡುಪಿ ಜಿಲ್ಲೆಯ ಮೊದಲ ಕ್ರೆಡಿಟ್ ಸಹಕಾರ ಸಂಘವಾಗಿ ಈ ಪ್ರಶಸ್ತಿ ಪಡೆದಿದೆ.

ಡಿಜಿಟಲ್ ಸೇವೆಗಳು: ಚೇತನಾ ಮೊಬೈಲ್ ಆ್ಯಪ್

ಡಿಜಿಟಲೀಕರಣದ ಭಾಗವಾಗಿ ಅಭಿವೃದ್ಧಿಪಡಿಸಿದ “ಚೇತನಾ ಮೊಬೈಲ್ ಆ್ಯಪ್” ಮೂಲಕ ಗ್ರಾಹಕರು ತಮ್ಮ ಖಾತೆಗಳಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ, ಸಾಲ ಖಾತೆ ನಿರ್ವಹಣೆ ಹಾಗೂ ಸಂಘದ ನೂತನ ಯೋಜನೆಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಆ್ಯಪ್ ಗೆ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿರುವ ಈ ಆ್ಯಪ್‌ನ ಸದುಪಯೋಗ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಶಾಖೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಸಂಘದ ಎಲ್ಲಾ ಶಾಖೆಗಳಲ್ಲಿ ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್ ಸೇವೆ, ಹಣ ವರ್ಗಾವಣೆ ಸೌಲಭ್ಯ, ಆರೋಗ್ಯ ಕಾರ್ಡ್, ವಿಮಾ ಸೇವೆಗಳು, ದೈನಿಕ ಠೇವಣಿ ಸಂಗ್ರಾಹಕರಿಗೆ ಮೊಬೈಲ್ ಮೂಲಕವೇ ಠೇವಣಿ ಸಂಗ್ರಹಣೆಗೆ ಅವಕಾಶ ಒದಗಿಸಿರುವುದು, “0” ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್ಡ್ ಕಾಲ್ ಸೇವೆ ಹಾಗೂ ಉಚಿತ SMS ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಮುಂದಿನ ಗುರಿ - ರೂ.5000 ಕೋಟಿ ವಾರ್ಷಿಕ ವಹಿವಾಟು, ರೂ.1400 ಕೋಟಿ ಒಟ್ಟು ವ್ಯವಹಾರ

ಮುಂದಿನ ವರ್ಷದಲ್ಲಿ ರೂ. 750 ಕೋಟಿ ಠೇವಣಿ ಹಾಗೂ ರೂ. 650 ಕೋಟಿ ಸಾಲ ವಿತರಣೆ ಸೇರಿದಂತೆ ಒಟ್ಟು ರೂ. 1400 ಕೋಟಿ ವ್ಯವಹಾರ ನಡೆಸುವ ಗುರಿಯನ್ನು ಸಂಸ್ಥೆಯು ಹೊಂದಿದೆ.

ಇದಲ್ಲದೆ, ಉಡುಪಿಯ ಹೃದಯಭಾಗದಲ್ಲಿ ಈಗಾಗಲೇ ಖರೀದಿಸಿರುವ 1 ಎಕರೆ ಜಾಗದಲ್ಲಿ ಅಂದಾಜು ರೂ. 10 ಕೋಟಿ ವೆಚ್ಚದಲ್ಲಿ “ಸಹಕಾರ ಸೌಧ” ನಿರ್ಮಾಣದ ಯೋಜನೆಯನ್ನು ಕೈಗೊಂಡಿದೆ.

ಪ್ರತಿಯೊಂದು ಶಾಖೆಯಲ್ಲಿ ಶಾಖಾ ಸಲಹಾ ಸಮಿತಿಗಳನ್ನು ರಚಿಸಲಾಗಿದ್ದು, ಅವುಗಳ ಮೇಲ್ವಿಚಾರಣೆಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದರು.

ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುಯೆಲ್, ಆಡಳಿತ ಮಂಡಳಿಯ ಸದಸ್ಯರಾದ ಸಂಜೀವ ಕಾಂಚನ್, ಪುರುಷೋತ್ತಮ ಪಿ. ಶೆಟ್ಟಿ, ಉಮಾನಾಥ ಎಲ್, ವಿನಯ ಕುಮಾರ್ ಟಿ.ಎ, ಪದ್ಮನಾಭ ನಾಯಕ್, ಹಾಜಿ ಸೈಯದ್ ಅಬ್ದುಲ್ ರಜಾಕ್, ಸದಾಶಿವ ನಾಯ್ಕ್, ಮನೋಹರ ಎಸ್. ಶೆಟ್ಟಿ, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರಿ ಎಸ್. ಭಟ್, ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ಪ, ಲೆಕ್ಕಿಗರಾದ ಅಶ್ವಿನಿ ಕುಮಾರ್ ತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಗ್ರಾಹಕರ ಸಮಾವೇಶ – 2026

ದೇಶದ ಭವಿಷ್ಯ, ಆರ್ಥಿಕ ಕ್ಷೇತ್ರಕ್ಕೆ ಶಕ್ತಿ ತುಂಬುವ ಉಜ್ವಲ ಅವಕಾಶ ಸಹಕಾರ ರಂಗಕ್ಕಿದ್ದು ಕೇಂದ್ರ ಸರಕಾರ ಪ್ರತ್ಯೇಕ ಸಹಕಾರ ಸಚಿವಾಲಯ ಮೂಲಕ ಸಹಕಾರಿ ವ್ಯವಹಾರದಲ್ಲಿ ಆರ್ಥಿಕ ಶಿಸ್ತು ತಂದಿದೆ ಎಂದು ಉಡುಪಿ ಶಾಸಕರಾದ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಗ್ರಾಹಕರ ಸಮಾವೇಶವನ್ನು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ 01-02-2026 ಭಾನುವಾರದಂದು ಉದ್ಘಾಟಿಸಿ ಮಾತನಾಡಿದರು. ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಏಕ ಮನಸ್ಸಿನಿಂದ ಮಾಡುವ ಕೆಲಸ ಸಾಧನೆಗೆ ಪೂರಕ. ಸ್ವಾತಂತ್ರ್ಯ ಪೂರ್ವದಲ್ಲಿ ಹಿರಿಯರು ಸಹಕಾರ ಸಂಸ್ಥೆ ಸ್ಥಾಪಿಸಿ ಆರ್ಥಿಕ ಶಕ್ತಿ ನೀಡಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳ ತವರು ನೆಲ ಕರಾವಳಿಯಲ್ಲಿ ಸಹಕಾರ ಕ್ಷೇತ್ರ ಮುಂಚೂಣಿಯಲ್ಲಿದೆ ಎಂದರು.

ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಹಕಾರ ಚಳವಳಿಯಲ್ಲಿ ಸಂಸ್ಥೆ ಉಳಿಯಲು ಬದ್ಧತೆ, ಇಚ್ಛಾ ಶಕ್ತಿ ಬಲು ಮುಖ್ಯ. ರಾಜಕೀಯದಲ್ಲಿ ಮಾಡಿದ ಕೆಲಸಕ್ಕೆ ಬೆಲೆಯಿಲ್ಲ. ನಾವು ಯಶಸ್ಸು ಪಡೆಯೋದಕ್ಕಿಂತ ನಾವು ಮಾಡಿದ ಕೆಲಸದಿಂದ ತೃಪ್ತಿ ಪಡೆಯಬೇಕು ಎಂದರು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್, ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್, ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುಯೆಲ್, ನಿರ್ದೇಶಕರಾದ ಸಂಜೀವ ಕಾಂಚನ್, ಎಲ್. ಉಮಾನಾಥ, ಪುರುಷೋತ್ತಮ ಪಿ ಶೆಟ್ಟಿ, ಮನೋಹರ್ ಎಸ್ ಶೆಟ್ಟಿ, ಸಾಧು ಸಾಲ್ಯಾನ್, ಪದ್ಮನಾಭ ಕೆ ನಾಯಕ್, ವಿನಯ ಕುಮಾರ್ ಟಿ.ಎ, ಸದಾಶಿವ ನಾಯ್ಕ್, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ಜಯಾ ಶೆಟ್ಟಿ, ಗಾಯತ್ರಿ ಎಸ್ ಭಟ್ ಉಪಸ್ಥಿತರಿದ್ದರು.

ಅನಘಾ ಬೈಲೂರು ಪ್ರಾರ್ಥಿಸಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಲ. ನೀಲಕಂಠ ಎಮ್. ಹೆಗಡೆ ಗ್ರಾಹಕ ಜಾಗೃತಿ, ಸಂವಾದ ನಡೆಸಿಕೊಟ್ಟರು. ದಯಾನಂದ ಕರ್ಕೇರ, ಸೊಸೈಟಿಯ ಮಲ್ಪೆ ಶಾಖೆಯ ವ್ಯವಸ್ಥಾಪಕಾರದ ನವೀನ್ ಕೆ ಕಾರ್ಯಕ್ರಮ ನಿರೂಪಿಸಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಸಂಘದ ಸಿಬ್ಬಂದಿಯವರನ್ನೊಳಗೊಂಡ ತಂಡದಿಂದ ಸ್ಯಾಕ್ಸೋಫೋನ್ ವಾದನ, ನೃತ್ಯ ನೂಪುರ ಡ್ಯಾನ್ಸ್ ಅಕಾಡೆಮಿ ಬೈಲೂರು ಇವರಿಂದ ನೃತ್ಯ ಕಾರ್ಯಕ್ರಮ, ಪಿ. ಕಾಳಿಂಗ ರಾವ್ ಸ್ಮೃತಿ ಮೆಲೋಡೀಸ್‌ನ ರಾಜೇಶ್ ಶಾನ್‌ಬೋಗ್ ಬಾರ್ಕೂರು ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ವಿಶೇಷ ಆಕರ್ಷಣೆಯಾಗಿ ಸೊಸೈಟಿಯ ಸಿಬ್ಬಂದಿಗಳು ಯಕ್ಷಗಾನ ನಾಟ್ಯ ವೈಭವ ಪ್ರದರ್ಶನ ಮೂಲಕ ಕಲಾಪ್ರಿಯರ ಮನ ಗೆದ್ದರು. ತದನಂತರ ತೆಂಕು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ರಾಜಾ ರುದ್ರಕೋಪ” ಯಕ್ಷಗಾನ ಜನಮನ ಗೆಲ್ಲುವ ಮೂಲಕ ಗ್ರಾಹಕರ ಸಮಾವೇಶವು ಸಂಪನ್ನಗೊಂಡಿತು.

ಬಡಗಬೆಟ್ಟು ಸೊಸೈಟಿಗೆ ಸಹಕಾರ ಮಾಣಿಕ್ಯ ಪ್ರಶಸ್ತಿ

72ನೇ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಬಡಗಬೆಟ್ಟು ಸಹಕಾರ ಸಂಘವು ಸಹಕಾರ ಮಾಣಿಕ್ಯಪ್ರಶಸ್ತಿಯನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದೆ.

 

ಈ ಗೌರವದ ಭಾಗವಾಗಿ ಸಂಘಕ್ಕೆ ₹10,000 ನಗದು ಬಹುಮಾನ ಹಾಗೂ 5 ಗ್ರಾಂ ಬಂಗಾರದ ಪದಕ ಪ್ರದಾನ ಮಾಡಲಾಗಿದೆ.

ಸಹಕಾರ ಕ್ಷೇತ್ರದಲ್ಲಿ ಸಂಘದ ಸೇವೆ, ಉತ್ತಮ ನಿರ್ವಹಣೆ ಮತ್ತು ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯು ಲಭಿಸಿದ್ದು, ಬಡಗಬೆಟ್ಟು ಸೊಸೈಟಿಯು “ಸಹಕಾರ ಮಾಣಿಕ್ಯ” ಪ್ರಶಸ್ತಿ ಪಡೆದ ಉಡುಪಿ ಜಿಲ್ಲೆಯ ಪ್ರಥಮ ಕ್ರೆಡಿಟ್ ಸಹಕಾರ ಸಂಘವಾಗಿರುತ್ತದೆ. ಸಂಘದ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಪ್ರಧಾನ ವ್ಯವಸ್ಥಾಪಕರಾದ    ಶ್ರೀ ರಾಜೇಶ್ ವಿ. ಶೇರಿಗಾರ್‌ರವರು ಗಣ್ಯರ ಸಮಕ್ಷಮ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವಿಧಾನಸಭಾ ಸ್ಪೀಕರ್ ಸನ್ಮಾನ್ಯ ಯು.ಟಿ ಖಾದರ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಜಿ.ಟಿ ದೇವೇಗೌಡ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್ ರಾಜೇಂದ್ರ ಕುಮಾರ್, ಕರ್ನಾಟಕ ವಿಧಾನ ಪರಿಷತ್ ಸದಸ್ಯರುಗಳಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಕಿಶೋರ್ ಕುಮಾರ್ ಬೊಟ್ಯಾಡಿ, ಶಾಸಕರಾದ ವೇದವ್ಯಾಸ ಕಾಮತ್, ಯಶ್‌ಪಾಲ್ ಸುವರ್ಣ, ಸಹಕಾರ ಇಲಾಖಾಧಿಕಾರಿಗಳು, ಜಿಲ್ಲಾ ಯೂನಿಯನ್ ಅಧ್ಯಕ್ಷರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶ್ವ ಯೋಗ ದಿನಾಚರಣೆ – 2025

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ವಿಶ್ವಯೋಗ ದಿನಾಚರಣೆಯನ್ನು ಅಜ್ಜರಕಾಡು ಟೌನ್ (ಮಿನಿ) ಹಾಲ್ ನಲ್ಲಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಜಯಕರ ಶೆಟ್ಟಿ ಇಂದ್ರಾಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರ್ಟ್ ಆಫ್ ಲಿವಿಂಗ್ ಮಣಿಪಾಲದ ಸುನೀತಾ ನಾಯಕ್ ಯೋಗ ತರಬೇತಿಯನ್ನು ನೀಡಿದರು. ಸಂಘದ ಸಿಬ್ಬಂದಿ ಭಾರತಿ ಪಿ. ಹೆಗ್ಡೆ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರು, ಶಾಖಾ ಸಲಹಾ ಸಮಿತಿ ಸದಸ್ಯರು, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಮತ್ತು ದೈನಿಕ ಠೇವಣಿ ಸಂಗ್ರಾಹಕರು ಯೋಗಾಭ್ಯಾಸ ನಡೆಸಿದರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ಸ್ವಾಗತಿಸಿ, ಮಲ್ಪೆ ಶಾಖಾ ವ್ಯವಸ್ಥಾಪಕರಾದ ನವೀನ್ ಕೆ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ವಂದಿಸಿದರು.

ವಿಶ್ವ ಪರಿಸರ ದಿನಾಚರಣೆ- ಚಿತ್ರಕಲಾ ಸ್ಪರ್ಧೆ

ಬೈಲೂರು ಪರಿಸರ ಪ್ರೇಮಿಗಳು, ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ, ಸಹಕಾರ ಇಲಾಖೆ ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕಲಾ ಕಿರಣ್ ಕ್ಲಬ್ ಬೈಲೂರು ಹಾಗೂ ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆ ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಇವರ ಸಹಭಾಗಿತ್ವದಲ್ಲಿ ದಿನಾಂಕ 08-06-2025 ರಂದು ಬೈಲೂರು ದೇವಸ್ಥಾನದ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಸಿರು ನನ್ನೂರು ಬೈಲೂರು ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರವನ್ನು ಉದ್ಘಾಟಿಸಿ ಪರಿಸರವನ್ನು ಹೇಗೆ ಶುದ್ಧವಾಗಿ ಇರಿಸುವುದು ಹಾಗೂ ಉತ್ತಮ ಪರಿಸರಕ್ಕೆ ನಮ್ಮ ಕೊಡುಗೆ ಏನು ಎನ್ನುವ ಬಗ್ಗೆ ವಿವರಿಸಿದರು ಹಾಗೂ ಪರಿಸರದ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿ ತಿಳಿದುಕೊಳ್ಳುವಂತೆ ಪೋಷಕರು ಮಕ್ಕಳಿಗೆ ಮನೆಯಲ್ಲಿ ಈ ಬಗ್ಗೆ ತಿಳಿಸಬೇಕೆಂದು ವಿನಂತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಶ್ರೀನಿವಾಸರಾವ್ ಉಡುಪಿ ಜಿಲ್ಲಾ ಪಂಚಾಯತ್ ನಿವೃತ್ತ ಉಪ ಕಾರ್ಯದರ್ಶಿ ಶ್ರೀ ಶ್ರೀನಿವಾಸರಾವ್ ಮನೆಮನೆಗಳಲ್ಲಿ ಶುಚಿತ್ವದ ಕಾರ್ಯಕ್ರಮವನ್ನು ಯಾವ ರೀತಿ ಹಮ್ಮಿಕೊಳ್ಳಬೇಕು ಜವಾಬ್ದಾರಿಯುತ ನಾಗರಿಕರಾಗಿ ನಾವು ಯಾವ ರೀತಿಯಲ್ಲಿ ಪರಿಸರವನ್ನು ರಕ್ಷಿಸಬೇಕು ಎಂದು ತಿಳಿ ಹೇಳಿದರು. ಇನ್ನೋರ್ವ ಅತಿಥಿ ಎಸ್.ವಿ.ಸಿ ಬ್ಯಾಂಕಿನ ನಿರ್ದೇಶಕರಾದ ತೋನ್ಸೆ ಸತೀಶ್ ರಾವ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದೇಶವನ್ನು ನೀಡಿದರು. ಸಭಾ ವೇದಿಕೆಯಲ್ಲಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಾರ್ಯದರ್ಶಿಯಾದ ಶ್ರೀ ನಾರಾಯಣ ದಾಸ್ ಉಡುಪ ಹಾಗೂ ಮೊಕ್ತೆಸರರಾದ ಶ್ರೀ ಕಳತ್ತೂರು ರಮೇಶ್ ಶೆಟ್ಟಿ ಹಾಗೂ ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ಶೇರಿಗಾರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಶ್ರೀಮತಿ ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಸಭಾ ವೇದಿಕೆಯಲ್ಲಿ ಬಹುಮಾನವನ್ನು ವಿತರಿಸಲಾಯಿತು. ಬಡಗಬೆಟ್ಟು ಸೊಸೈಟಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಶ್ರೀ ದುರ್ಗಾಪ್ರಸಾದ್ ವಂದಿಸಿದರು.

ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ-2025 ದಿ. ಡಾ. ವಿ. ಎಸ್. ಆಚಾರ್ಯ ಇವರ ಜಯಂತಿಯ ಪ್ರಯುಕ್ತ ನುಡಿನಮನ ಹಾಗೂ ‘ಏಕ್ ಪೇಡ್ ಮಾ ಕೆ ನಾಮ್’ ಗಿಡ ನೆಡುವ ಸಂಕಲ್ಪ

ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ-2025 “ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸಬಲ್ಲವು” ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಉಡುಪಿ, ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ. ಉಡುಪಿ ಹಾಗೂ ಸಹಕಾರ ಇಲಾಖೆ, ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ದಿ. ಡಾ. ವಿ. ಎಸ್. ಆಚಾರ್ಯ ಇವರ ಜಯಂತಿಯ ಪ್ರಯುಕ್ತ ನುಡಿನಮನ ಹಾಗೂ ‘ಏಕ್ ಪೇಡ್ ಮಾ ಕೆ ನಾಮ್’ ಗಿಡ ನೆಡುವ ಸಂಕಲ್ಪ….. ಹಸಿರು ಪರಿಸರ ನಿರ್ಮಿಸುವ ಕಾಯಕಲ್ಪ ಎಂಬ ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಡಾ. ವಿ. ಎಸ್. ಆಚಾರ್ಯ ಜಿಲ್ಲಾ ತರಬೇತಿ ಕೇಂದ್ರ, ಪ್ರಗತಿ ನಗರ, ಮಣಿಪಾಲ ಇಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ., ಉಡುಪಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರಾದ ಶ್ರೀಯುತ. ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರು ವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಗಳು ಡಾ.ಕಿರಣ್ ಆಚಾರ್ಯ, ಮುಖ್ಯಸ್ಥರು, ಎಲುಬುಮತ್ತುಕೀಲು ವಿಭಾಗ, ಕೆಎಂಸಿ ಮಣಿಪಾಲ, ಜನಾರ್ದನ ಕೊಡವೂರು ಸ್ಕೌಟ್ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕಜಿಲ್ಲಾಸಂಸ್ಥೆ ಉಡುಪಿ, ಶ್ರೀ. ಅರುಣ್ ಕುಮಾರ್ ಶೆಟ್ಟಿ, ಅಧ್ಯಕ್ಷರು , ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ನಿ., ಶ್ರೀ. ನಾರಾಯಣ ಬಲ್ಲಾಳ್ ಅಧ್ಯಕ್ಷರು, ಕೊಡವೂರು ವ್ಯವಸಾಯ ಸೇವಾ ಸಹಕಾರ ಸಂಘ ನಿ., ಶ್ರೀ. ವೈ.ಸುಧೀರ್ ಕುಮಾರ್, ಅಧ್ಯಕ್ಷರು, ಪಡುಬಿದ್ರಿ ವ್ಯವಸಾಯಿಕ ಸೊಸೈಟಿ ನಿ.,ಪಡುಬಿದ್ರಿ, ಶ್ರೀ. ಅಶೋಕ್ ಶೆಟ್ಟಿ ಮೈರ್ಮಾಡಿ, ಅಧ್ಯಕ್ಷರು, ಉಡುಪಿ ಟಿ.ಎ.ಪಿ.ಸಿ. ಎಂ. ಎಸ್ ಲಿ., ಉಡುಪಿ, ಶ್ರೀ. ಯತೀಶ್ ಕುಮಾರ್, ಅಧ್ಯಕ್ಷರು, ಅಲೆವೂರು ಗ್ರಾಮ ಪಂಚಾಯಿತ್, ಶ್ರೀ. ಮೋಹನ್ ಉಪಾಧ್ಯ, ಅಧ್ಯಕ್ಷರು, ಕೆನರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಶ್ರೀ. ಸುರೇಶ್ ಶೆಟ್ಟಿ, ಅಧ್ಯಕ್ಷರು, ಗುರು ನಿತ್ಯಾನಂದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ.,ಉಡುಪಿ , ಶ್ರೀ. ಹರೀಶ್ ಕಿಣಿ ,ನಿರ್ದೇಶಕರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಧಾನ ವ್ಯವಸ್ಥಾಪಕರು ಶ್ರೀ ರಾಜೇಶ್ ವಿ. ಶೇರಿಗಾರ್ , ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ. ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು.

ಸುಮಾರು 15.00 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಕಾರ್ಯಕ್ರಮ

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರ, ಪ್ರತಿಭಾ ಪುರಸ್ಕಾರ, ಸಸಿ ವಿತರಣಾ ಸಮಾರಂಭ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಜರಗಿತು.

ಉಡುಪಿ ತಹಸೀಲ್ದಾರ್ ಪಿ. ಗುರುರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಕೆ.ಆರ್ ಮಾತನಾಡಿದರು.
ಉಡುಪಿ ನಗರ ಸಭೆ ಪರಿಸರ ಅಭಿಯಂತರ ರವಿಪ್ರಕಾಶ್, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್, ಸೊಸೈಟಿಯ ಉಪಾಧ್ಯಕ್ಷರಾದ ಜಾರ್ಜ್ ಸ್ಯಾಮ್ಯುಯೆಲ್, ನಿರ್ದೇಶಕರಾದ ಪುರುಷೋತ್ತಮ ಪಿ. ಶೆಟ್ಟಿ, ಜಯಾ ಶೆಟ್ಟಿ, ಸದಾಶಿವ ನಾಯ್ಕ್, ಎಲ್. ಉಮಾನಾಥ, ವಿನಯ ಕುಮಾರ್ ಟಿ ಎ, ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಸಹಕಾರ ವರ್ಷ-2025 ಅಂಗವಾಗಿ “ಏಕ್ ಪೇಡ್ ಮಾ ಕೆ ನಾಮ್” ಧ್ಯೇಯ ವಾಕ್ಯದಡಿ ಗಿಡ ನೆಡುವ ಸಂಕಲ್ಪ, ಹಸಿರು ಪರಿಸರ ನಿರ್ಮಾಣದ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸಹಕಾರ ಇಲಾಖೆ ವತಿಯಿಂದ ವಿದ್ಯಾರ್ಥಿ, ಸಂಘ ಸಂಸ್ಥೆಗಳ ಮೂಲಕ ತಾಯಿ ಹೆಸರಲ್ಲಿ ಮನೆಗೊಂದು ಗಿಡ ನೆಡಲು ಅಂದು ಲಕ್ಷ ಗಿಡ ವಿತರಿಸುತ್ತಿದ್ದು, ಗಿಡವನ್ನು ಉತ್ತಮವಾಗಿ ಪೋಷಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಘೋಷಿಸಲಾಯಿತು.

ಶಾಲೆಗಳಿಗೆ ಸುಮಾರು 15 ಲಕ್ಷ ರೂ. ಕೊಡುಗೆ
  • ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
  • ಹಸಿರು ಜಾಗೃತಿ ಅಂಗವಾಗಿ ಭಿತ್ತಿಪತ್ರ ಅನಾವರಣ, ಶಾಲಾ ಮಕ್ಕಳಿಗೆ ಗಿಡ ವಿತರಣೆ
  • ಕನ್ನಡ ಮಾಧ್ಯಮದ 35 ಶಾಲಾ ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶಿಕ್ಷಣ ಪರಿಕರ, ಸಮವಸ್ತ್ರ ವಿತರಣೆ

ಕೆರೆಯ ನೀರನು ಕೆರೆಗೆ ಚೆಲ್ಲಿ ಧ್ಯೇಯದಡಿ ಗಳಿಸಿದ ಲಾಭಾಂಶದಲ್ಲಿ ಸಮಾಜಮುಖಿ ಯೋಜನೆಗಳಿಗೆ ಪ್ರತಿವರ್ಷ 25 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ.
– ಬಿ. ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ

ಪ್ರತಿಭೆ ಬಂಡವಾಳ, ಆತ್ಮವಿಶ್ವಾಸ ಹೆಚ್ಚಳ

ಮಕ್ಕಳೇ… ನಿಮ್ಮ ಪ್ರತಿಭೆಯೇ ಬಂಡವಾಳವಾಗಲಿ, ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಿ, ಸಣ್ಣದಲ್ಲ ದೊಡ್ಡ ಕನಸನ್ನೇ ಕಾಣಿ ಎಂದು ತರಬೇತುದಾರರಾದ ರಾಜೇಂದ್ರ ಭಟ್ ಕೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಶೇಷ ಉಪನ್ಯಾಸ ನೀಡಿ 1,300 ಗಿಡ ನೆಟ್ಟು ಬೆಳೆಸಿದ ಸಾಲು ಮರದ ತಿಮ್ಮಕ್ಕ, ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ, ಶಾಸ್ತ್ರೀಯ ಸಂಗೀತದ ಮೂಲಕ 1,300 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾದ ಮಧ್ಯಪ್ರದೇಶದ ಫಾಲಕ್ ಮುಚ್ಚಲ್ ಸಾಧನೆಯನ್ನು ವಿದ್ಯಾರ್ಥಿಗಳ ಮುಂದೆ ಪರಿಣಾಮಕಾರಿಯಾಗಿ ಪ್ರೇರೇಪಿಸುವಂತೆ ಪ್ರಸ್ತುತಪಡಿಸಿದರು.

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಮಲ್ಪೆ ಶಾಖಾ ವ್ಯವಸ್ಥಾಪಕರಾದ ನವೀನ್ ಕೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ವಂದಿಸಿದರು.