ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಉಡುಪಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ ಅಂಗವಾಗಿ ಗಾಂಧಿ ಜಯಂತಿ ಹಾಗೂ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಉಡುಪಿಯಲ್ಲಿ ಆಚರಿಸಲಾಯಿತು.
ಉಡುಪಿ ನಗರದ ಕ್ಲಾಕ್ ಟವರ್ ಸಮೀಪದ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಪುಷ್ಪಮಾಲಾರ್ಪಣೆ ಮಾಡಿ, ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಉಡುಪಿ ಇದರ ಅಧ್ಯಕ್ಷರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ ಸ್ವಚ್ಛತೆ, ಸತ್ಯ, ಅಹಿಂಸೆ ಮತ್ತು ಸೇವೆಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಸ್ವಚ್ಛ ಪರಿಸರ ನಿರ್ಮಾಣವು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಸ್ವಚ್ಛ ಭಾರತ್ ಅಭಿಯಾನವನ್ನು ಕೇವಲ ಒಂದು ದಿನದ ಕಾರ್ಯಕ್ರಮವಾಗಿ ಪರಿಗಣಿಸದೆ ಜೀವನಶೈಲಿಯ ಭಾಗವನ್ನಾಗಿ ಅಳವಡಿಸಿಕೊಳ್ಳಬೇಕು. ಗಾಂಧೀಜಿಯವರ ಆದರ್ಶಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆಯನ್ನು ತರಲು ಸಾಧ್ಯ” ಎಂದು ಕರೆ ನೀಡಿದರು.
ಬಳಿಕ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಬ್ಬಂದಿ ವರ್ಗ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಸಿಬ್ಬಂದಿಗಳು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಪರಿಸರ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ವೈ. ಎಲ್ಲಮ್ಮ, ಬ್ಲಾಕ್ ಶಿಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಶ್ರೀಮತಿ ಅನುಷಾ ಕೋಟ್ಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ನಿ. ಉಡುಪಿ, ಶ್ರೀ ದಿವಾಕರ್ ಸನಿಲ್, ಉಪಾಧ್ಯಕ್ಷರು ತುಳುಕೂಟ (ರಿ) ಉಡುಪಿ ಹಾಗೂ ಶ್ರೀಮತಿ ಸುಮನಾ ಶೇಖರ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆ, ಗಣನಾಥ್ ಎಕ್ಕಾರ್, ಹಿರಿಯ ಸಾಹಿತಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.




