ರೂ. 15.09 ಕೋಟಿ ನಿವ್ವಳ ಲಾಭ – ಶೇ.15 ಡಿವಿಡೆಂಡ್ ಘೋಷಣೆ
ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆ.13 ರಂದು ಉಡುಪಿಯ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ಸೊಸೈಟಿಯ ಅಧ್ಯಕ್ಷರಾದ ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಭೆಯನ್ನು ಉದ್ಘಾಟಿಸಿದರು.
ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಸಂಘವು 22,869 ಸದಸ್ಯರು, ರೂ.4.89 ಕೋಟಿ ಪಾಲು ಬಂಡವಾಳ ಹಾಗೂ ರೂ.658.80 ಕೋಟಿ ಠೇವಣಿ ಹೊಂದಿದ್ದು, ರೂ.533.96 ಕೋಟಿ ಹೊರಬಾಕಿ ಸಾಲ ಹೊಂದಿದೆ. 2025-26ನೇ ಸಾಲಿನಲ್ಲಿ ಸುಮಾರು ರೂ.4,089 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ಸದಸ್ಯರ ಸಹಕಾರದಿಂದ ರೂ.15.09 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಯಿತು.
ಸತತ 2 ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿ ಹಾಗೂ 9 ಬಾರಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ಸಂಘಕ್ಕೆ, 2025-26ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ “ಸಾಧನಾ ಪ್ರಶಸ್ತಿ” ಲಭಿಸಿದೆ. ಇದು ಸಂಘಕ್ಕೆ ಸತತ 20ನೇ ಜಿಲ್ಲಾ ಪ್ರಶಸ್ತಿಯಾಗಿದೆ.
ಅದೇ ರೀತಿ, 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಸಂಘಕ್ಕೆ “ಸಹಕಾರ ಮಾಣಿಕ್ಯ” ಪ್ರಶಸ್ತಿ ಲಭಿಸಿದ್ದು, ನಗದು ಬಹುಮಾನ ಹಾಗೂ 5 ಗ್ರಾಂ ಬಂಗಾರದ ಪದಕವನ್ನು ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ ಮೊದಲ ಕ್ರೆಡಿಟ್ ಸಹಕಾರ ಸಂಘವಾಗಿ ಈ ಪ್ರಶಸ್ತಿಗೆ ಪಾತ್ರವಾಗಿರುವುದು ಸಂಘದ ಹೆಗ್ಗಳಿಕೆಯಾಗಿದೆ.
ಸಾಧಕರಿಗೆ ಸನ್ಮಾನ
ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಐವರು ಸಾಧಕರನ್ನು ಸನ್ಮಾನಿಸಲಾಯಿತು. ಫ್ಯಾಷನ್ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಬಾಲಪ್ರತಿಭೆ ಸಚಿತ ರಾವ್, ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ ರಾಷ್ಟ್ರೀಯ ವೇದಿಕೆಯಲ್ಲಿ ಉಡುಪಿಯನ್ನು ಪ್ರತಿನಿಧಿಸಿದ ಮೊದಲ ಯುವತಿ ಸ್ಫೂರ್ತಿ ಡಿ. ಶೆಟ್ಟಿ, ಸತತ 25 ಗಂಟೆಗಳ ಕಾಲ 200ಕ್ಕೂ ಅಧಿಕ ದಾಸರ ಪದಗಳನ್ನು ಪ್ರಸ್ತುತಪಡಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಿಶ್ವದಾಖಲೆ ಮಾಡಿದ ವಿದುಷಿ ಸಂಗೀತ ಬಾಲಚಂದ್ರ, ಸ್ವಾವಲಂಬನೆಯ ಮೂಲಕ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಶ್ರೀಮತಿ ಸುಗುಣಾ ಪೈ ಟಿ., ಹಾಗೂ ಪವರ್ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ನಲ್ಲಿ ಜಿಲ್ಲಾ, ರಾಜ್ಯ, ವಿಶ್ವವಿದ್ಯಾಲಯ ಹಾಗೂ ದಕ್ಷಿಣ ಭಾರತ ಮಟ್ಟದಲ್ಲಿ ಸಾಧನೆ ಮಾಡಿದ ಆ್ಯನ್ನಿ ಲಿಸಾ ಅಮ್ಮನ್ನ ಅವರನ್ನು ಗೌರವಿಸಲಾಯಿತು.
ಸಂಘದ ಮಲ್ಪೆ ಶಾಖೆಯಲ್ಲಿ ಸುಮಾರು 11 ವರ್ಷಗಳ ಕಾಲ ದೈನಿಕ ಠೇವಣಿ ಸಂಗ್ರಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಗೋವಿಂದಾಸ್ ಕೆ. ಸುವರ್ಣ ಅವರನ್ನು ಬೀಳ್ಕೊಡಲಾಯಿತು.
ಸಂಘದ ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಕಾಂಚನ್, ಎಲ್. ಉಮಾನಾಥ, ಪುರುಷೋತ್ತಮ ಪಿ. ಶೆಟ್ಟಿ. ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಿನಯ ಕುಮಾರ್ ಟಿ.ಎ., ಪದ್ಮನಾಭ ಕೆ ನಾಯಕ್, ಸದಾಶಿವ ನಾಯ್ಕ್, ಮನೋಹರ್ ಎಸ್ ಶೆಟ್ಟಿ, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರ್ರಿ ಎಸ್. ಭಟ್ ಸಭೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮಲ್ಪೆ ಶಾಖಾ ವ್ಯವಸ್ಥಾಪಕರಾದ ನವೀನ್ ಕೆ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ವಂದಿಸಿದರು.




