ಇತಿಹಾಸ - Badagabettu Credit Cooperative Society

1918 ರಲ್ಲಿ ಮದ್ರಾಸ್ ಪ್ರಾಂತ್ಯದ ಅಧಿಪತ್ಯದಲ್ಲಿ ಕಟಪಾಡಿ ಬೀಡು ದಿ| ಜಗನ್ನಾಥ ಬಲ್ಲಾಳರ ಹಿರಿತನದಲ್ಲಿ ಸ್ಥಾಪನೆಗೊಂಡ ಸಂಘವು 1979 ನೇ ಇಸವಿಯವರೆಗೆ ಉಡುಪಿಯ ಆಸುಪಾಸಿನ ರೈತರಿಗೆ ಕೃಷಿ ಉಪಕರಣ, ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ, ಕೀಟ ನಾಶಕ ಸಾಮಗ್ರಿ, ಪಡಿತರ ಸಾಮಗ್ರಿಗಳ ಪೂರೈಕೆ ಹಾಗೂ ವಿತರಣೆಯನ್ನು ಪ್ರಧಾನ ವ್ಯವಹಾರವಾಗಿ ಮಾಡುತ್ತಿದ್ದುದ್ದರಿಂದ ಬೆಳವಣಿಗೆಯು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ 1980 ರ ಸಮಯದಲ್ಲಿ ಸಹಕಾರಿ ಇಲಾಖೆಯ ಆಡಳಿತಾಧಿಕಾರಿಯವರ ಅಧೀನದಲ್ಲಿದ್ದ ಸಂಘದ ಆಡಳಿತವನ್ನು ಹಿರಿಯ ಸಹಕಾರಿಗಳಾದ ಶ್ರೀಯುತ ಟಿ. ಶಂಭು ಶೆಟ್ಟಿಯವರ ನೇತೃತ್ವದಲ್ಲಿ ದಿ| ಡಾ. ಎಸ್. ರಮಾನಂದ ಭಟ್, ಶ್ರೀ ಸಂಜೀವ ಕಾಂಚನ್, ಶ್ರೀ ಪಿ.ಕೆ. ಸತ್ಯನಾರಾಯಣ, ಶ್ರೀ ಚಂದ್ರಶೇಖರ ಶೆಟ್ಟಿಗಾರ್ ಇವರನ್ನೊಳಗೊಂಡ ಆಡಳಿತ ಮಂಡಳಿಯು ವಹಿಸಿಕೊಂಡು ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರ ನಿಸ್ವಾರ್ಥ ಸೇವೆಯಿಂದ ಸಂಘದ ಪ್ರಗತಿ ಹಾಗೂ ಬೆಳವಣಿಗೆ ಹೊಸ ಆಯಾಮ ದೊರಕಿತೆನ್ನಬಹುದು.

ನಂತರ ಸಮರ್ಥ ಆಡಳಿತ ಮಂಡಳಿಯವರ ಸಹಕಾರಿ ಮನೋಭಾವ, ನಿರ್ದೇಶನ ದಕ್ಷ ನಿಸ್ವಾರ್ಥ ಸೇವೆಯ ಪ್ರಧಾನ ವ್ಯವಸ್ಥಾಪಕರು ಮತ್ತು 60 ಸ್ಥಳೀಯ ಸಿಬ್ಬಂದಿ ವರ್ಗದವರ ಪ್ರಾಮಾಣಿಕ, ಕ್ಷಿಪ್ರ ಸೇವೆಯ ಫಲಶೃತಿಯಾಗಿ ಸಂಘವು ದಿನದಿಂದ ದಿನಕ್ಕೆ ಅತ್ಯಂತ ಕ್ಷಿಪ್ರಗತಿಯಲ್ಲಿ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿರುತ್ತದೆ. 1980 ನೇ ಇಸವಿಯಲ್ಲಿ ಕೇವಲ 306 ಸದಸ್ಯರಿಂದ ರೂ. 6,200/- ಪಾಲು ಬಂಡವಾಳ ಮತ್ತು ರೂ. 4,664/- ಠೇವಣಿ ಹೊಂದಿದ್ದ ಸಂಘದ ವಾರ್ಷಿಕ ವಹಿವಾಟು ಇತ್ತೀಚಿನ ದಿನಗಳಲ್ಲಿ ದಿನವೊಂದಕ್ಕೆ ಸರಾಸರಿ 3.75 ಕೋಟಿಗೂ ಮಿಕ್ಕಿರುತ್ತದೆ. ಪ್ರಸ್ತುತ 28,000 ಸದಸ್ಯರಿಂದ ರೂ. 4.10 ಕೋಟಿ ಪಾಲು ಬಂಡವಾಳ ಹಾಗೂ ಸರಿ ಸುಮಾರು 300 ಕೋಟಿ ಠೇವಣಿಯನ್ನು ಸಂಗ್ರಹಿಸಿ, ಸ್ವತಂತ್ರ ಹಾಗೂ ಸ್ವಾವಲಂಬಿ ಘಟಕವಾಗಿ ಪರಿಗಣಿತವಾಗಿದೆ. ವರದಿ ವರ್ಷದಲ್ಲಿ ಸುಮಾರು 267 ಕೋಟಿ ರೂ. ಹೊರಬಾಕಿ ಸಾಲ ಇದ್ದು, ಸಂಘವು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸರಕಾರ ಅಥವಾ ಇನ್ನಿತರ ಯಾವುದೇ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ಸಹಾಯವನ್ನು ಯಾಚಿಸದೆ ತನ್ನ ಸ್ವಂತ ಸಂಪನ್ಮೂಲಗಳ ಕ್ರೋಢೀಕರಣದೊಂದಿಗೆ ವ್ಯಾಪಾರ ವಹಿವಾಟು, ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತಿದ್ದು ಸದಸ್ಯರಿಗೆ ಅವರ ಕೋರಿಕೆಗೆ ಅನುಗುಣವಾಗಿ ವಿವಿಧ ರೀತಿಯ ಸೇವೆ ಹಾಗೂ ಆರ್ಥಿಕ ಸೌಲಭ್ಯಗಳನ್ನು ನೀಡುತ್ತಾ ಬಂದಿರುತ್ತದೆ.

ಸಂಘವು ಉಡುಪಿ ನಗರದ ಮಿಷನ್ ಕಂಪೌಂಡ್‍ನಲ್ಲಿರುವ ಸ್ವಂತ ಕಟ್ಟಡವಾದ “ಚೇತನಾ” ವಾಣಿಜ್ಯ ಸಂಕೀರ್ಣದಲ್ಲಿ ಸಂಪೂರ್ಣ ಗಣಕೀಕೃತ ಆಡಳಿತ ಕಛೇರಿಯನ್ನು ಹೊಂದಿದ್ದು, ಅದರಲ್ಲಿರುವ 14 ಕೊಠಡಿಗಳನ್ನು ವಿವಿಧ ಉದ್ದೇಶಗಳಿಗಾಗಿ ಇತರರಿಗೆ ಬಾಡಿಗೆಗೆ ನೀಡಲಾಗಿದೆ. ಉಡುಪಿಯಲ್ಲಿ ಸಂಪೂರ್ಣ ಹವಾನಿಯಂತ್ರಿತ ಪ್ರಧಾನ ಕಛೇರಿ ಹಾಗೂ ಮುಖ್ಯ ಶಾಖೆಯನ್ನು ಒಳಗೊಂಡಂತೆ ಸಂಪೂರ್ಣ ಗಣಕೀಕೃತ ಇಂದ್ರಾಳಿ, ಬೈಲೂರು-ಕೊರಂಗ್ರಪಾಡಿ, ಉದ್ಯಾವರ, ಅಂಬಾಗಿಲು, ಉಡುಪಿ ಹೃದಯ ಭಾಗದಲ್ಲಿ ಉಡುಪಿ ಸಿಟಿ, ಕಡಲ ತೀರದ ಮಲ್ಪೆಯಲ್ಲಿ ಮಲ್ಪೆ ಶಾಖೆ, ಶಿರ್ವ-ಮಂಚಕಲ್ ನಲ್ಲಿ ಶಿರ್ವ ಶಾಖೆ, ಡಯಾನಾ ಕುಕ್ಕಿಕಟ್ಟೆಯಲ್ಲಿ ಕುಕ್ಕಿಕಟ್ಟೆ ಶಾಖೆ ಹೀಗೆ 9 ಶಾಖೆಗಳನ್ನು ಒಳಗೊಂಡು ಕಾರ್ಯ ನಿರ್ವಹಿಸುತ್ತಿದೆ. ಇವುಗಳಲ್ಲಿ ಇಂದ್ರಾಳಿ, ಉದ್ಯಾವರ, ಸಿಟಿ, ಮಲ್ಪೆ, ಶಿರ್ವ, ಕುಕ್ಕಿಕಟ್ಟೆ ಶಾಖೆಗಳು ಸ್ವಂತ ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಂಘದ ಪ್ರಮುಖ ಅಗತ್ಯತೆಗಳಲ್ಲಿ ಒಂದಾದ ಸಭಾಭವನವನ್ನು ಸಂಘದ ಸ್ಥಾಪಕರಾದ ಕಟಪಾಡಿ ಬೀಡು ದಿ|| ಜಗನ್ನಾಥ ಬಲ್ಲಾಳರ ಸವಿನೆನಪಿಗಾಗಿ “ಜಗನ್ನಾಥ ಸಭಾಭವನ” ನಾಮಧೇಯದಲ್ಲಿ, ಸುಸಜ್ಜಿತವಾಗಿ ಸುಮಾರು 400 ರಿಂದ 500 ಆಸನವನ್ನು ಅಳವಡಿಸುವಂತೆ ರಚನೆ ಮಾಡಲಾಗಿದೆ.

ಸಂಪರ್ಕ ಸಂಖ್ಯೆ:

0820-2527420

ನಮ್ಮ ವಿಳಾಸ:

"ಚೇತನಾ ಕಟ್ಟಡ" ಮಿಷನ್ ಕಾಂಪೌಂಡ್,ಉಡುಪಿ -576101

ಇಮೇಲ್ ವಿಳಾಸ:

[email protected]